ವಿಜಯಪುರ:ತಾಲೂಕಿನ ತಾಳಿಕೋಟೆ-ಹಡಗಿನಾಳ ಸಂಪರ್ಕಿಸುವ ಡೋಣಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಈ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಹಡಗಿನಾಳ ಸುತ್ತಮುತ್ತಲಿನ ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ.
ತಾಲೂಕಿನ ಹಲವು ಗ್ರಾಮಗಳಿಗೆ ಹೊಂದಿಕೊಂಡಿರುವ ಡೋಣಿ ನದಿ ಬಹಳ ವರ್ಷದ ನಂತರ ತುಂಬಿ ಹರಿಯುತ್ತಿದೆ. ಇದರ ಪರಿಣಾಮ ತಾಳಿಕೋಟೆ-ಹಡಗಿನಾಳ ಸಂಪರ್ಕಿಸುವ ಸೇತುವೆ ಸಂಚಾರ ಕಡಿತಗೊಂಡಿದೆ. ಈ ಸೇತುವೆಗೆ ಅಲ್ಪಸ್ವಲ್ಪ ನೀರು ಹರಿದು ಹೋದರೂ ಸಹ ಸೇತುವೆ ನೀರಿನಲ್ಲಿ ಮುಳುಗಿ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ.
ತಾಳಿಕೋಟೆ-ಹಡಗಿನಾಳ ಸೇತುವೆ ಕಾಮಗಾರಿ ಅಪೂರ್ಣ: ಪ್ರವಾಹದಿಂದ ಸಂಪರ್ಕ ಕಳೆದುಕೊಂಡ ಗ್ರಾಮಸ್ಥರು ಎರಡು ವರ್ಷಗಳ ಹಿಂದೆ ಶಾಶ್ವತ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಆದರೆ ಅದರ ಶೇ. 30ರಷ್ಟು ಕಾಮಗಾರಿ ಸಹ ಇನ್ನೂ ಪೂರ್ಣಗೊಂಡಿಲ್ಲ. ಈ ಬಾರಿ ಮತ್ತೆ ಅಧಿಕ ಪ್ರಮಾಣದಲ್ಲಿ ಮಳೆ ನೀರು ಡೋಣಿ ನದಿಗೆ ಹರಿದು ಬಂದ ಕಾರಣ ತಾಳಿಕೋಟೆ-ಹಡಗಿನಾಳ ಸಂಪರ್ಕದ ಕಡಿತಗೊಂಡಿದೆ. ಇದರ ಪರಿಣಾಮ ಹಡಗಿನಾಳ, ಹರನಾಳ, ಮೂಕಿಹಾಳ, ಶಿವಪುರ, ಅಗರಗೊಂಡ ಗ್ರಾಮಗಳ ಜನರು ಪರದಾಡುತ್ತಿದ್ದಾರೆ.
ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ. ಹೀಗಾಗಿ ತಾಳಿಕೋಟೆಗೆ ಇದೇ ಸೇತುವೆ ಮೂಲಕ ಬರುವ ಹಡಗಿನಾಳ, ಹರನಾಳ, ಮೂಕಿಹಾಳ ಸೇರಿದಂತೆ ಹಲವು ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.