ಮದ್ದೇಬಿಹಾಳ: ನಿರೀಕ್ಷೆಯಂತೆ ತಾಳಿಕೋಟಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಸಂಗಮೇಶ ಇಂಗಳಗಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ಮುಸ್ತಫಾ ಚೌಧರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಮೀಸಲಿರಿಸಿದ್ದ ಪರಿಶಿಷ್ಟ ಪಂಗಡದ ಏಕೈಕ ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯ ಸಂಗಮೇಶ ಇಂಗಳಗಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ಅವಿರೋಧ ಎಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಅನೀಲ್ ಕುಮಾರ್ ಢವಳಗಿ ಘೋಷಿಸಿದರು.
ತಾಳಿಕೋಟಿ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟ ಕೂಗು ಹಾಕಿದ ಸದಸ್ಯೆ : ತಾಳಿಕೋಟಿ ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಮುಸ್ತಫಾ ಚೌಧರಿ ಅವರ ಜೊತೆಗೆ ಸಹ ಸದಸ್ಯರು ವಿಜಯೋತ್ಸವ ಆಚರಿಸುವ ವೇಳೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಅಕ್ಕಮಹಾದೇವಿ ಕಟ್ಟೀಮನಿ ಕೂಗು ಹಾಕಿ ಸಂಭ್ರಮಿಸಿದರು.
ತಾಳಿಕೋಟೆ ಪುರಸಭೆಯ 23 ಸ್ಥಾನಗಳ ಪೈಕಿ ಬಿಜೆಪಿಯ ಹಾಗೂ ಕಾಂಗ್ರೇಸ್ ತಲಾ ಮೂವರು, ಜೆಡಿಎಸ್‌ನಿಂದ ಓರ್ವ ಸದಸ್ಯ ಚುನಾಯಿತರಾಗಿದ್ದರು. 16 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಇದರಲ್ಲಿ ಪಕ್ಷೇತರ ಸದಸ್ಯ ಮುಸ್ತಫಾ ಚೌಧರಿ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ಅವಿರೋಧವಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದರು. ಚುನಾವಣಾ ಪ್ರಕ್ರಿಯೆಯನ್ನು ತಹಸೀಲ್ದಾರ್ ಅನೀಲ್ ಕುಮಾರ್ ಢವಳಗಿ, ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿ ಹಾಗೂ ಸಿಬ್ಬಂದಿ ನಡೆಸಿದರು.
ಚುನಾವಣಾ ಪ್ರಕ್ರಿಯೆಗೆ ಹಾಜರಾದ ಶಾಸಕ ನಡಹಳ್ಳಿ:ಇಂದಿನ ಚುನಾವಣೆ ಸಭೆ ಮತ್ತೆ ಮುಂದೂಡಬಹುದೆಂಬ ಸುದ್ದಿಗಳನ್ನು ತಿಳಿದುಕೊಂಡಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾದರು. ಒಟ್ಟು 23 ಸದಸ್ಯರು ಹಾಗೂ ಶಾಸಕರು ಸೇರಿ 24 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ವಿಜಯೋತ್ಸವ: ತಾಳಿಕೋಟಿ ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬಿಜೆಪಿ-ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗುತ್ತಲೇ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಪುರಸಭೆ ಕಚೇರಿಯಿಂದ ಪಾಂಡುರಂಗ ವಿಠಲ ಮಂದಿರದವರೆಗೆ ಎರಡೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಭಾರೀ ಭದ್ರತೆ :ಅತೀ ಸೂಕ್ಷ್ಮ ಪ್ರದೇಶವಾಗಿರುವ ತಾಳಿಕೋಟಿ ಪಟ್ಟಣದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಸಿಪಿಐ ಆನಂದ ವಾಘಮೋಡೆ, ಪಿಎಸ್ವೈ ಮಲ್ಲಪ್ಪ ಮಡ್ಡಿ, ಎಸ್.ಎಚ್.ಪವಾರ ಹಾಗೂ 80ಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು.