ವಿಜಯಪುರ: ಜಿಲ್ಲೆಯಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಾಣಿಕೆ ಮತ್ತು ಗೋಹತ್ಯೆಯ ಬಗ್ಗೆ ತೀವ್ರ ನಿಗಾ ಇಡುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತ ಜಾನುವಾರುಗಳ ಸಾಗಾಣಿಕೆ ಮತ್ತು ವಧೆ ತಡೆಯುವ ಕುರಿತು ನಡೆದ ಪೂರ್ವಭಾವಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ, ಅಕ್ರಮವಾಗಿ ಜಾನುವಾರ ಗಳ ಸಾಗಾಣಿಕೆ ಮತ್ತು ಗೋಹತ್ಯೆ ತಡೆಗಾಗಿ ಜಿಲ್ಲಾದ್ಯಂತ 8 ತಂಡಗಳನ್ನು ರಚಿಸಲಾಗುತ್ತಿದ್ದು, ವಿಜಯಪುರ ನಗರದಲ್ಲಿ 4 ಹಾಗೂ ಪ್ರತಿ ತಾಲೂಕಿನಲ್ಲಿ ಒಂದರಂತೆ ತಂಡಗಳನ್ನು ರಚಿಸಿ ಅಕ್ರಮವಾಗಿ ಗೋಹತ್ಯೆ ತಡೆಯುವ ಕುರಿತಂತೆ ಸೂಕ್ತ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು.
ಅಕ್ರಮವಾಗಿ ಜಾನುವಾರುಗಳ ಸಾಗಾಣಿಕೆ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೂಕ್ತ ನಿಗಾ ಇಟ್ಟು ಅವಶ್ಯಕ ಕ್ರಮ ಕೈಗೊಳ್ಳಬೇಕು. ಅದರಂತೆ ಜಾನುವಾರುಗಳ ಅಕ್ರಮವಾಗಿ ವಧೆಗೆ ಸಂಬಂಧಿಸಿದಂತೆ ಪಶು ಸಂಗೋಪನೆ, ಪಶುವೈದ್ಯರು ಹಾಗೂ ಪಶುವೈದ್ಯ ಪರಿವೀಕ್ಷಕರು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಗೋಹತ್ಯೆ ನಿಷೇಧ ಕಾಯ್ದೆಯಡಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ತಿಳಿಸಿದರು.
ಅದರಂತೆ ಮುಂಬರುವ ಬಕ್ರೀದ್ ಹಬ್ಬದಂದು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಮುಸ್ಲಿಂ ಬಾಂಧವರು ಕೂಡಾ ಕೋವಿಡ್ ಅಪಾಯದ ಹಿನ್ನೆಲೆಯಲ್ಲಿ ಸಾರ್ವಜನಿಕ ವಾಗಿ ಗುಂಪು-ಗುಂಪಾಗಿ ಸೇರಬಾರದು. ಸೌಹಾರ್ದಯುತ ಮತ್ತು ಶಾಂತಿಯುತವಾಗಿ ಸಾಮಾಜಿಕ ಅಂತರ ಕಾಯ್ದು ಹಬ್ಬವನ್ನು ಆಚರಿಸಬೇಕು. ಜಿಲ್ಲೆಯಲ್ಲಿ ಬಿಡಾಡಿ ದನಗಳು, ಜಾನುವಾರುಗಳು ಮತ್ತು ಶ್ವಾನಗಳಿಗೆ ಮುಂಬರುವ 14 ದಿನಗಳ ಕಾಲ ಸರ್ಕಾರೇತರ ಸಂಘ ಸಂಸ್ಥೆಗಳ ನೆರವಿನೊಂದಿಗೆ ಮೇವು, ಆಹಾರ ವಿತರಿಸುವುದರ ಜೊತೆಗೆ ಅವಶ್ಯಕ ಕಡೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪಶು ಸಂಗೋಪನೆ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಎನ್ಜಿಓಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಡಿಸಿ ಸೂಚಿಸಿದರು.
ಸಭೆಯಲ್ಲಿ ಗೋಶಾಲೆಗಳ ಸ್ಥಿತಿಗತಿ, ರಸ್ತೆಯ ಮೇಲೆ ಓಡಾಡುವ ಬಿಡಾಡಿ ದನಗಳ ನಿಯಂತ್ರಣ ಸೇರಿದಂತೆ ವಿವಿಧ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್. ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಟಿ. ವೇಣುಗೋಪಾಲ, ಹುಣಸಿಕಟ್ಟಿ ಸೇರಿದಂತೆ ಇತರರಿದ್ದರು.