ಮುದ್ದೇಬಿಹಾಳ:ಚಲನಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡುವವರ ಸಂಖ್ಯೆಯಲ್ಲಿ ಇಳಿಮುಖವಾಗಿರುವ ಮಧ್ಯೆ ಚಿತ್ರತಂಡವೊಂದು ಸಿನಿಮಾ ಟಿಕೆಟ್ ಖರೀದಿಸಿದರೆ ಟಿ ಶರ್ಟ್ ಉಚಿತವಾಗಿ ನೀಡುವ ಮೂಲಕ ವಿಶೇಷ ರೀತಿಯಲ್ಲಿ ಪ್ರಚಾರಕ್ಕೆ ಮುಂದಾಗಿದೆ.
ಲಕ್ಷ್ಯ ಚಿತ್ರದ ಟಿಕೆಟ್ ಕೊಂಡ್ರೆ ಟಿ ಶರ್ಟ್ ಫ್ರೀ ಮೇಘಾ ಕಂಬೈನ್ಸ್ ಡ್ರೀಮ್ ಪಿಚ್ಚರ್ಸ್ ಅವರ ರವಿ ಸಾಸನೂರ ನಿರ್ದೇಶನದ 'ಲಕ್ಷ್ಯ' ಚಿತ್ರದ ಪ್ರಚಾರಕ್ಕಾಗಿ ಈ ವಿನೂತನ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು ಹಾಗೂ ಇಟಗಿಯ ಭೂಕೈಲಾಸ ಗದ್ದುಗೆ ಮಠದ ಗುರುಶಾಂತವೀರ ಶಿವಾಚಾರ್ಯುರು ಕುಂಟೋಜಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಚಲನಚಿತ್ರದ ಪ್ರಚಾರಕ್ಕೆ ಚಿತ್ರದ ಟಿಕೆಟ್ (ವೋಚರ್) ಹಾಗೂ ಟಿ ಶರ್ಟ್ ನೀಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶ್ರೀಗಳು, ಉತ್ತರ ಕರ್ನಾಟಕದ ಪ್ರತಿಭೆಗಳ ನಿರ್ದೇಶನದ ಈ ಚಿತ್ರವನ್ನು ನಾವೆಲ್ಲಾ ನೋಡಿ ಹಾರೈಸಬೇಕು. ಚಿತ್ರ ಶತ ದಿನೋತ್ಸವ ಆಚರಿಸಲಿ ಎಂದು ಹಾರೈಸಿದರರು. ಚಿತ್ರದ ನಿರ್ದೇಶಕ ರವಿ ಸಾಸನೂರ ಮಾತನಾಡಿ, 'ಲಕ್ಷ್ಯ' ಚಿತ್ರದ ಪ್ರಚಾರಕ್ಕಾಗಿ ನಮ್ಮ ಚಿತ್ರದ ಟಿಕೆಟ್ (ವೋಚರ್) ತೆಗೆದುಕೊಂಡರೆ ಒಂದು ಗುಣಮಟ್ಟದ ಟಿ ಶರ್ಟ್ ನಮ್ಮ ಸಿನಿಮಾ ತಂಡ ಉಚಿತವಾಗಿ ನೀಡಲಿದೆ. ಈ ಚಿತ್ರವನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ಇಟಗಿ ಗುರುಶಾಂತವಿರ ಶ್ರೀ, ಸಹ ನಿರ್ದೇಶಕ ಅನಿಲ ತೇಲಂಗಿ, ಮಹಾಂತೇಶ ಬೂದಿಹಾಳ ಮಠ ಗೋಪಾಲ ಹೂಗಾರ, ಸಂಗಮೇಶ ಒಣರೂಟ್ಟಿ, ಸಿದ್ದು ಹೆಬ್ಬಾಳ, ಸೋಮಶೇಖರ್ ಆಣ್ಣೆಪ್ಪನವರ, ನಿಜಾಮ್, ದೇವರಾಜ ಮುಂತಾದವರು ಉಪಸ್ಥಿತರಿದ್ದರು.