ವಿಜಯಪುರ:ರಾಜ್ಯದ 96 ಸಾವಿರ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರ ಗೌರವಧನವನ್ನು ಹೆಚ್ಚಿಸಬೇಕು. ಇಲ್ಲವಾದರೆ ಈ ಬಾರಿ ಅಧಿವೇಶನದಲ್ಲಿ ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳ ವಿರೋಧಿಸಿ ತಾವು ಹೆಚ್ಚುವರಿ ವೇತನ ಪಡೆಯುವುದಿಲ್ಲ ಎಂದು ಸಭಾಪತಿಗಳಿಗೆ ಅರ್ಜಿ ಸಲ್ಲಿಸುವುದಾಗಿ ವಿಧಾನಪರಿಷತ್ ಸದಸ್ಯ ಸುನೀಲ್ಗೌಡ ಪಾಟೀಲ್ ನಿರ್ಣಯ ಕೈಗೊಂಡಿದ್ದಾರೆ.
ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರಿಗೆ ಗೌರವಧನ ಹೆಚ್ಚಿಸುವಂತೆ ಸುನೀಲ್ಗೌಡ ಪಾಟೀಲ್ ಒತ್ತಾಯ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಮ್ಮ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನವನ್ನು 500ರೂ. ನಿಂದ 1000 ರೂ.ವರೆಗೆ ಏರಿಸಲು ಹೋರಾಟ ನಡೆಸಿ ಯಶಸ್ವಿಯಾಗಿದ್ದೇನೆ. ಈಗ ಅದನ್ನು 3000ರೂ.ಗೆ ಏರಿಸಬೇಕು ಎಂದು ಕಳೆದ ನಾಲ್ಕು ಅಧಿವೇಶನದಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದೆ. ಈಗ ಸರ್ಕಾರ ಆರ್ಥಿಕ ಸಂಕಷ್ಡ ನೆಪವೊಡ್ಡಿ ಗೌರವಧನ ಹೆಚ್ಚಿಸಲು ನಿರಾಕರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ 96 ಸಾವಿರ ಗ್ರಾಪಂ ಸದಸ್ಯರಿಗೆ ಕೇವಲ 3000ರೂ. ಏರಿಸಿ ಎಂದರೆ ಆರ್ಥಿಕ ನಷ್ಟದ ನೆಪ ಹೇಳುತ್ತಿದ್ದಾರೆ. ಆದರೆ ಸಿಎಂ ಆದಿಯಾಗಿ ಸಚಿವರು, ಶಾಸಕರು, ಎಂಎಲ್ಸಿಗಳಿಗೆ ವೇತನ ಆಥಿತ್ಯ ಭತ್ಯೆ ಏಕಾಏಕಿ ಎರಡು ಪಟ್ಟು ಏರಿಸಿ ಸದನದಲ್ಲಿ ಬಿಲ್ ಪಾಸ್ ಮಾಡಲಾಗಿದೆ. ಇದನ್ನು ನಾನು ಒಪ್ಪುವುದಿಲ್ಲ. ಹೀಗಾಗಿ ಗ್ರಾಪಂ ಸದಸ್ಯರ ಗೌರವಧನ ಹೆಚ್ಚಳ ಮಾಡುವವರೆಗೂ ತಾವು ಈಗ ಜಾರಿಯಾಗಿರುವ ವೇತನ ಭತ್ಯೆ ಸ್ವೀಕರಿಸುವುದಿಲ್ಲ. ಈ ಬಗ್ಗೆ ಸಭಾಪತಿಗಳನ್ನು ಭೇಟಿ ಮಾಡಿ ಪತ್ರ ಸಲ್ಲಿಸುವೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಿಗೆ ಕೇರಳ ಮಾದರಿಯಲ್ಲಿ ಪ್ರತಿ ತಿಂಗಳು 10ಸಾವಿರ ಗೌರವಧನ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚುನಾವಣೆ ಪ್ರಚಾರ ವೇಳೆ ಘೋಷಣೆ ಮಾಡಿದ್ದರು. ಆದರೆ, ಇಲ್ಲಿಯವರೆಗೆ ಈ ಕೆಲಸವಾಗಿಲ್ಲ. ನಾವು ಕೇಳುತ್ತಿರುವುದು ಕೇವಲ 3000 ರೂ. ಅದನ್ನು ದೊರಕಿಸಿಕೊಡುವ ಕೆಲಸ ಮಾಡಲಿ, ಆಕಸ್ಮಿಕವಾಗಿ 10ಸಾವಿರ ಗೌರವಧನ ದೊರಕಿಸಿಕೊಡಲು ಕಟೀಲ್ ಯಶಸ್ವಿಯಾದರೆ ಅವರನ್ನು ಪಕ್ಷಾತೀತವಾಗಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಮೂವರು ಬಲಿ