ಮುದ್ದೇಬಿಹಾಳ (ವಿಜಯಪುರ): ಕೊರೊನಾ ವೈರಸ್ ನಡುವೆ ವರುಣನ ಹೊಡೆತಕ್ಕೆ ಅನ್ನದಾತನ ಬದುಕು ಬೀದಿಗೆ ಬಂದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲೂರ ಗ್ರಾಮದ ರೈತರೊಬ್ಬರು ಬೆಳೆದಿದ್ದ ಸೂರ್ಯಕಾಂತಿ ಬೆಳೆ ಮಳೆಯಿಂದ ಸಂಪೂರ್ಣ ಹಾಳಾಗಿದೆ.
ನಿರಂತರ ಮಳೆತಂದ ಫಜೀತಿ: ರೈತನ ಕೈಸೇರದೆ ಕೊಳೆಯುತ್ತಿದೆ ಸೂರ್ಯಕಾಂತಿ - Sunflower oil
ನಿರಂತರವಾಗಿ ಸುರಿದ ಮಳೆಯಿಂದಾಗಿ ಸೂರ್ಯಕಾಂತಿ ಬೆಳೆ ನಾಶವಾಗಿದ್ದು, ರೈತ ಕಂಗಾಲಾಗಿದ್ದಾನೆ. ಇನ್ನೇನು ಹೂ ಬಿಡುವ ವೇಳೆ ಮಳೆಯಾರ್ಭಟ ಜೋರಾದ ಹಿನ್ನೆಲೆ ಫಸಲು ಕೈಸೇರದೆ ಕೊಳೆತು ಮಣ್ಣುಪಾಲಾಗಿದೆ.
ಮುದ್ದೇಬಿಹಾಳ ತಾಲೂಕಿನ ಆಲೂರ ಗ್ರಾಮದ ರೈತ ಮಹಾಂತೇಶ ಹಾದಿಮನಿ 4 ಎಕರೆ ಹೊಲದಲ್ಲಿ ಬಿತ್ತಿದ್ದ ಸೂರ್ಯಕಾಂತಿ ಬೆಳೆಯಲ್ಲಿ 3 ಎಕರೆ ಬೆಳೆ ಸಂಪೂರ್ಣ ಹಾಳಾಗಿದೆ. ಸೂರ್ಯಕಾಂತಿ ಹೂ ಬಿಡುವ ವೇಳೆ ಮಳೆ ಸುರಿದಿದ್ದರಿಂದ ಹೂವುಗಳು ಕೊಳೆತು ಅಪಾರ ನಷ್ಟ ಸಂಭವಿಸಿದೆ.
ಲಕ್ಷ ಲಕ್ಷ ಖರ್ಚು ಮಾಡಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ ಬೆಳೆ ಕೈಗೆ ಬಾರದೇ ರೈತ ಕಂಗಾಲಾಗಿದ್ದಾನೆ. ಪ್ರಕೃತಿ ವಿಕೋಪದಡಿಯಲ್ಲಿ ಸರ್ಕಾರ ಪರಿಹಾರ ನೀಡಬೇಕು ಎಂದು ನೊಂದ ರೈತ ಮಹಾಂತೇಶ ಹಾದಿಮನಿ ಒತ್ತಾಯಿಸಿದ್ದಾರೆ. ತಮ್ಮ ಹೊಲದಲ್ಲಿ ಬೆಳೆ ಹಾಳಾಗಿದ್ದರೂ ಅಧಿಕಾರಿಗಳು ಮಾತ್ರ ಇತ್ತಕಡೆ ಗಮನಹರಿಸಿಲ್ಲ ಎಂದು ದೂರಿದ್ದಾರೆ.