ವಿಜಯಪುರ:ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಸರ್ಕಾರದ ಸೂಚನೆಯಂತೆ 'ಭಾನುವಾರ ಲಾಕ್‌ಡೌನ್'ಗೆ ಇಡೀ ನಗರವೇ ಸಂಪೂರ್ಣ ಸ್ತಬ್ಧವಾಗಿದೆ. ಗುಮ್ಮಟ ನಗರಿಯಲ್ಲಿ ಯಾವುದೇ ಮೂಲೆಗೆ ಹೋದ್ರು ಬೀದಿಯಲ್ಲಿ ಜನ್ರು ಕಾಣುತ್ತಿಲ್ಲ.
ಕೊರೊನಾ ತಡೆಯಲು ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶವನ್ನು ಜನತೆ ಕಡ್ಡಾಯವಾಗಿ ಪಾಲನೆ ಮಾಡಿ ಮನೆಯಲ್ಲಿದ್ದಾರೆ. ಆಸ್ಪತ್ರೆ, ಮೆಡಿಕಲ್ ಹಾಗೂ ಅಗತ್ಯ ದಿನಸಿ ಸೇರಿದಂತೆ ತುರ್ತು ಸೇವೆಗಳಿಗೆ ಮಾತ್ರ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ನಗರದ ಬಡಾವಣೆಗಳ ಒಳ ರಸ್ತೆಗಳಿಗೆ ಪೊಲೀಸರು ಬ್ಯಾರಿಕೇಡ್ ಹಾಕುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಬ್ರೇಕ್ ಹಾಕಿದ್ದು, ಪ್ರತಿದಿನಕ್ಕೆ ಹೋಲಿಕೆ ಮಾಡಿದರೆ ಮೆಡಿಕಲ್ ಅಂಗಡಿಗೆ ಬರುವ ಗ್ರಾಹಕರು ಹೆಚ್ಚಾಗಿ ಮನೆಯಿಂದ ಹೊರ ಬರುತ್ತಿಲ್ಲ. ಇತ್ತ ತರಕಾರಿ ಮಾರಾಟಗಾರರು ಕೂಡ ಅಷ್ಟಾಗಿ ನಗರದಲ್ಲಿ ಕಾಣುತ್ತಿಲ್ಲ. ನಗರದಲ್ಲಿ 300ಕ್ಕೂ ಅಧಿಕ ಪೊಲೀಸರು ಲಾಕ್‌ಡೌನ್ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಇನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಸಂಕೀರ್ಣದ ಎಲ್ಲಾ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿವೆ. ನಗರದಲ್ಲಿ ಯಾವುದೇ ವಾಹನಗಳು ಓಡಾಟ ನಡೆಸಿದರೂ, ಅವುಗಳನ್ನು ಖಾಕಿ ಪಡೆ ಪರಿಶೀಲನೆ ಮಾಡಿ ಬಿಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಸರ್ಕಾರ ಭಾನುವಾರದ ಲಾಕ್‌ಡೌನ್ ಮುಂದುವರಿಸಿದರೆ, ಕೊರೊನಾ ವೈರಸ್ ನಿಯಂತ್ರಣಕ್ಕೆ ಬರಬಹುದು ಎಂದು ನಗರವಾಸಿಗಳು ಹೇಳುತ್ತಿದ್ದಾರೆ.