ವಿಜಯಪುರ: ಸರ್ಕಾರ ಹಂತ ಹಂತವಾಗಿ ಕೊರೊನಾ ನಿಯಂತ್ರಣಕ್ಕೆ ವಿಧಿಸಿದ ಲಾಕ್‌ಡೌನ್ ಸಡಿಲಿಕೆ ಮಾಡುತ್ತಿದೆ. ಇತ್ತ ವಿಜಯಪುರದಲ್ಲಿ ನಿತ್ಯವೂ ಶತಕದ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಜನರು ಆತಂಕಗೊಂಡಿದ್ದಾರೆ.
ಭಾನುವಾರದ ಲಾಕ್‌ಡೌನ್ ತೆರವು: ಸಾರ್ವಜನಿಕರಿಗೆ ಕೊರೊನಾ ಆತಂಕ ಭಾನುವಾರದ ಲಾಕ್‌ಡೌನ್ ಸಡಿಕೆ ಬಳಿಕ ನಗರದಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಕೊರೊನಾ ಆತಂಕ ಇಮ್ಮಡಿಯಾಗುತ್ತಿದೆ. ಸದ್ಯ ಜನರು ಕೊರೊನಾ ಭಯದಲ್ಲಿ ಬೀದಿಗಿಳಿಯುವಂತಾಗಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ. ಸರ್ಕಾರ ಸಂಡೇ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಕೊರೊನಾ ವೈರಸ್ ನಿಯಂತ್ರಣ ಸರ್ಕಾರ ವಿಧಿಸಿದ ನಿಯಮಾವಳಿಗಳನ್ನ ಗಾಳಿಗೆ ತೂರಿ ಓಡಾಟ ನಡೆಸುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ನಗರದ ಸಿದ್ದೇಶ್ವರ ಮಂದಿರ ರಸ್ತೆ, ಎಲ್‌ಬಿಎಸ್, ಗಾಂಧಿ ವೃತ್ತ ಸೇರಿದಂತೆ ಹಲವು ಭಾಗಗಳಲ್ಲಿ ಜನರು ಕೊರೊನಾ ಆತಂಕ ಮರೆತು ಜಮಾವಣೆಗೊಳ್ಳುತ್ತಿದೆ. ಪ್ರತಿ ನಿತ್ಯವೂ ಶತಕದ ಗಡಿ ದಾಟಿ ಕೊರೊನಾ ಲಗ್ಗೆ ಹಾಕುತ್ತಿರುವುದು ಒಂದು ಕಡೆಯಾದರೆ, ಗುಂಪಾಗಿ ಜನ ಸೇರುತ್ತಿರುವುದು ಕೋವಿಡ್ ವೈರಸ್ ಮತ್ತಷ್ಟು ಹೆಚ್ಚಾಗುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಜನ ಸಂದಣಿ ಕಡಿಮೆ ಮಾಡಲು ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಜಿಲ್ಲಾಡಳಿತ ಸಂಡೇ ಲಾಕ್‌ಡೌನ್ ಮೂಲಕ ಕೊರೊನಾ ನಿಯಂತ್ರಣ ಮಾಡ್ಬೇಕು ಎನ್ನುವುದು ಗುಮ್ಮಟನಗರಿ ಜನರ ಮಾತಾಗಿದೆ. ಅಲ್ಲದೇ ಮಾರುಕಟ್ಟೆಗಳಲ್ಲಿ ಜನರು ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲನೆ ಮಾಡದಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ. ಅಲ್ಲದೇ ಒಬ್ಬ ಕೊರೊನಾ ಸೋಂಕಿತ ವ್ಯಕ್ತಿ ಮಾರುಕಟ್ಟೆಯಲ್ಲಿ ಸುತ್ತಾಡಿದರೆ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತ ಜಿಲ್ಲೆಯಲ್ಲಿ ಒಟ್ಟು 3,132 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಅಲ್ಲದೇ ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 131 ಜನರಿಗೆ ಕೊರೊನಾ ತಗುಲಿರುವುದು ಜನರು ಆತಂಕಕ್ಕೆ ಒಳಗಾಗುವಂತಾಗಿದೆ. ಸಂಡೇ ಲಾಕ್‌ಡೌನ್ ತೆರವಿನ ಬಳಿಕ ಇಂದು ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣತ್ತಿತ್ತು. ಇತ್ತ ಸಾರ್ವಜನಿಕರು ಗುಂಪಾಗಿ ಸೇರದಂತೆ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಿಲ್ಲಾಡಳಿತ ಕಟ್ಟು ನಿಟ್ಟಾಗಿ ನಿಯಮ ಜಾರಿ ಮಾಡುವಂತೆ ಜನರು ಮನವಿ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ.