ಮುದ್ದೇಬಿಹಾಳ : ಸಾಲದ ಬಾಧೆ ತಾಳದೇ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿಯ ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸತತ ಏಳು ತಾಸುಗಳ ನಿರಂತರ ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿದ ಘಟನೆ ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ನಡೆದಿದೆ.
ಇಂಗಳಗೇರಿ ಗ್ರಾಮಸ್ಥ ಸಿದ್ದು ಬಸಲಿಂಗಪ್ಪ ದೋರನಳ್ಳಿ(30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬುಧವಾರ ಸಂಜೆ ಹೊಲಕ್ಕೆ ಹೋಗಿದ್ದ. ರಾತ್ರಿಯಾದರೂ ಮನೆಗೆ ಬಾರದ್ದರಿಂದ ಸಂಶಯಗೊಂಡ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ನಂತರ ಹೊಲದಲ್ಲಿನ ಬಾವಿಯ ಬಳಿ ಆತನ ಪಾದರಕ್ಷೆಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರು ಮತ್ತು ಅಗ್ನಿಶಾಮಕ ದಳ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು.
ಏಳು ತಾಸು ಕಾರ್ಯಾಚರಣೆ ನಡೆಸಿ ವ್ಯಕ್ತಿ ಶವ ಹೊರ ತೆಗೆದ ಅಗ್ನಿಶಾಮಕದಳ ಸಿಬ್ಬಂದಿ ಬೆಳಿಗ್ಗೆ 6.30 ರಿಂದ ಪ್ರಾರಂಭವಾದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಇಕ್ಕಟ್ಟಾದ ಹೊಲದ ರಸ್ತೆಯಿಂದಲೇ ಎರಡು ಕಿ.ಮೀವರೆಗೆ ತಲಾ 10 ಎಚ್.ಪಿ. ಸಾಮರ್ಥ್ಯದ ಎರಡು ಹಾಗೂ ಐದು ಎಚ್.ಪಿ ಸಾಮರ್ಥ್ಯದ ಎರಡು ಮೋಟರ್ ಹಚ್ಚಿ ಬಾವಿಯಲ್ಲಿದ್ದ 40 ಅಡಿ ಆಳದವರೆಗಿನ ನೀರನ್ನು ಹಳ್ಳಕ್ಕೆ ಹಾಯಿಸಿದ್ದಾರೆ.
ಬಳಿಕ 25 ಅಡಿಗಳಷ್ಟು ನೀರು ಸರಿದಾಗ ಸಿಬ್ಬಂದಿ ಎಂ.ಬಿ.ಪೂಜಾರಿ, ಬಿ.ವಾಯ್. ವಣಕ್ಯಾಳ ಬಾವಿಯಲ್ಲಿ ಇಳಿದು ಮೃತ ದೇಹವನ್ನು ಹೊರತೆಗೆದಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಯ ಕಾರ್ಯಕ್ಕೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.
ಘಟನಾ ಸ್ಥಳಕ್ಕೆ ತಾಳಿಕೋಟಿ ಪಿಎಸ್ಐ ಎಸ್.ಎಚ್. ಪವಾರ್, ಕಂದಾಯ ನಿರೀಕ್ಷಕ ಪವನ್ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.