ವಿಜಯಪುರ: ಶಿಕ್ಷಕಿಯ ವರ್ಗಾವಣೆಗೆ ಬೇಸರಗೊಂಡ ವಿದ್ಯಾರ್ಥಿಗಳು ಹಾಗೂ ಪೋಷಕರು ಶಿಕ್ಷಕಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಕಳೆದ 11 ವರ್ಷಗಳಿಂದ ಬಳೂತಿಯ ಸರ್ಕಾರಿ ಹಿರಿಯ ಪ್ರಾಥಮಿಕ ತೋಟದ ಶಾಲೆಯಲ್ಲಿ ಹಿರಿಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರತಿಭಾ ತೊರವಿ ಅವರಿಗೆ ಇತ್ತೀಚಿಗೆ ಬೇರೆ ಕಡೆಗೆ ವರ್ಗಾವಣೆಯಾಗಿತ್ತು. ಈ ಸಂಬಂಧ ಅವರಿಗೆ ಬೀಳ್ಕೊಡುಗೆ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ತಮ್ಮ ನೆಚ್ಚಿನ ಶಿಕ್ಷಕಿಯ ವರ್ಗಾವಣೆಯಿಂದ ನೊಂದು ಬಿಕ್ಕಿ ಬಿಕ್ಕಿ ಅತ್ತರು.
ಪ್ರತಿಭಾ ತೊರವಿ ಅವರು ಸಂಪನ್ಮೂಲ ವ್ಯಕ್ತಿಯಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದರು. ಶಿಕ್ಷಕಿಯ ವರ್ಗಾವಣೆ ಸುದ್ದಿ ಕೇಳಿ, ಗ್ರಾಮಸ್ಥರು ವರ್ಗಾವಣೆಯನ್ನು ರದ್ದುಗೊಳಿಸಿ ಇಲ್ಲಿಯೇ ಮುಂದುವರೆಸುವಂತೆ ತೊರವಿ ಅವರಿಗೆ ಮನವಿ ಮಾಡಿದರು. ಆದರೆ ಸರ್ಕಾರದ ನಿಯಮಾವಳಿಗಳನ್ನು ಮೀರುವಂತಿಲ್ಲ. ಹೀಗಾಗಿ ಹೋಗಲೇಬೇಕು ಎಂದು ಅವರು ಹೇಳಿದ್ದಾರೆ. ಪ್ರತಿಭಾ ತೊರವಿಯವರು ತಮ್ಮ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಕಂಡು, ಅವರಿಗೆ ಒಳ್ಳೆಯ ಸಂಸ್ಕಾರ, ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಮಕ್ಕಳ ಹೃದಯ ಗೆದ್ದಿದ್ದರು.