ವಿಜಯಪುರ: ಒಬ್ಬ ಮನುಷ್ಯ ಸಮಾಜದಲ್ಲಿ ಉತ್ತಮ ನಾಗರಿಕನಾಗುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ. ಗುರು - ಶಿಷ್ಯರ ನಡುವೆ ಉತ್ತಮ ಸಂಬಂಧ ಏರ್ಪಟ್ಟಿರುತ್ತದೆ. ಬಸವನಬಾಗೇವಾಡಿ ತಾಲೂಕಿನ ಕುಪ್ಪಕಡ್ಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವರ್ಗಾವಣೆಗೊಂಡಿದ್ದು, ಶಿಕ್ಷಕನನ್ನು ಕಳುಹಿಸಿಕೊಡಲಾಗದೇ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಬಸಗೊಂಡ ರಾಮತೀರ್ಥ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕ. 260 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ ಇವರು ವಿಜ್ಞಾನ ಮತ್ತು ಗಣಿತ ವಿಷಯ ಭೋದಿಸುತ್ತಿದ್ದರು. ಕಳೆದ 5 ವರ್ಷದಿಂದ ಇದೇ ಶಾಲೆಯಲ್ಲಿದ್ದು, ಇತ್ತೀಚಿಗೆ ಅವರ ಸ್ವ ಗ್ರಾಮ ಕೋಟ್ಯಾಳದ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಅಂದಿನಿಂದಲೇ ಮಕ್ಕಳು ಬೇಸರದಲ್ಲಿದ್ದರು.
ಶಿಕ್ಷಕನ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು ಬಿ.ಕೆ. ರಾಮತೀರ್ಥ ಸರ್ ವರ್ಗಾವಣೆಗೊಂಡ ಕೋಟ್ಯಾಳ ಗ್ರಾಮಕ್ಕೆ ತೆರಳಲು ಬೈಕ್ ಹತ್ತುತ್ತಿದ್ದಂತೆ ಮಕ್ಕಳ ಮನದಲ್ಲಿದ್ದ ನೋವು ಕಟ್ಟೆ ಒಡೆದು ಹೊರ ಹೊಮ್ಮಿತ್ತು. ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಶಿಕ್ಷಕನನ್ನು ಸುತ್ತುವರಿದು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಮುಗ್ಧ ಮಕ್ಕಳನ್ನು ಕಂಡು ಶಿಕ್ಷಕ ರಾಮತೀರ್ಥ ಸಹ ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿದ ಶಾಲೆಯ ಉಳಿದ ಶಿಕ್ಷಕರ ಕಣ್ಣಾಲಿಗಳೂ ತೇವಗೊಂಡಿವೆ.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆ ಈಗ ಪಾಸ್ ಮಾಡಿದ್ರೆ, 2023ಕ್ಕೆ ನಾವು ವಾಪಸ್ ಪಡಿತೀವಿ: ಬಿಜೆಪಿಗೆ ಸಿದ್ದರಾಮಯ್ಯ ಎಚ್ಚರಿಕೆ
ಈಗಿನ ಕಾಲದಲ್ಲಿ ಶಿಕ್ಷಕರನ್ನು ಗೋಳಾಡಿಸುವ ವಿದ್ಯಾರ್ಥಿಗಳ ಮಧ್ಯೆ ಈ ಗುರು-ಶಿಷ್ಯರ ಅನುಬಂಧ ನೋಡಿದ ಗ್ರಾಮಸ್ಥರು ಇಂತಹ ಶಿಕ್ಷಕನನ್ನು ಪಡೆದ ನಮ್ಮ ಮಕ್ಕಳೇ ಪುಣ್ಯವಂತರು ಎಂದು ಕೊಂಡಾಡಿದರು.