ಕರ್ನಾಟಕ

karnataka

ETV Bharat / state

ವಿಜಯಪುರ: 15ಕ್ಕೂ ಅಧಿಕ ಶ್ವಾನಗಳಿಗೆ ವಿಷವುಣಿಸಿ ಕೊಂದ ಕಿರಾತಕರು - ವಿಜಯಪುರ ‌ನಗರದ ಜುಮ್ಮಾ ಮಸೀದಿ

15ಕ್ಕೂ ಅಧಿಕ ಬೀದಿನಾಯಿಗಳಿಗೆ ವಿಷ ಹಾಕಿ ಹತ್ಯೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

Etv Bharat
Etv Bharat

By ETV Bharat Karnataka Team

Published : Dec 2, 2023, 7:34 PM IST

ವಿಜಯಪುರ : 15ಕ್ಕೂ ಅಧಿಕ ಶ್ವಾನಗಳಿಗೆ ವಿಷವುಣಿಸಿ ಕೊಂದ ಕಿರಾತಕರು

ವಿಜಯಪುರ: ಹದಿನೈದಕ್ಕೂ ಅಧಿಕ ಶ್ವಾನಗಳಿಗೆ ವಿಷವುಣಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ. ಇಲ್ಲಿನ ಜುಮ್ಮಾ ಮಸೀದಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯ ನಾಯಿಗಳಿಗೆ ದುಷ್ಕರ್ಮಿಗಳು ಆಹಾರದಲ್ಲಿ ವಿಷ ಬೆರೆಸಿ ನೀಡಲಾಗಿದ್ದು, 15ಕ್ಕೂ ಅಧಿಕ ನಾಯಿಗಳು ಮೃತಪಟ್ಟಿವೆ. ಜೊತೆಗೆ ಹಲವು ನಾಯಿಗಳು ಅಸ್ವಸ್ಥಗೊಂಡಿದ್ದು, ಪಶುವೈದ್ಯರು ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿದ್ದಾರೆ.

ವಿಜಯಪುರದ ಜುಮ್ಮಾ ಮಸೀದಿ ಬಳಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ನಗರದ ಬಡಿಕಮಾನ್, ಬಾಗಾಯತ್ ಬಡಾವಣೆ, ನಾಗರಬಾವಡಿ, ಶೆಡಜಿ ಮುಲ್ಲಾ ಬಡಾವಣೆ ಸೇರಿದಂತೆ ಹಲವು ಬಡಾವಣೆಯಲ್ಲಿ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸಿದ್ದವು. ನವೆಂಬರ್​ 27ರಂದು ಮೂವರು ಬಾಲಕರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಈ ಶ್ವಾನಗಳಿಗೆ ಹೆದರಿ ಬಡಾವಣೆಯ ಮಕ್ಕಳು ಶಾಲೆಗೆ ತೆರಳದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ವಿಚಾರ ಪಾಲಿಕೆಯವರ ಗಮನಕ್ಕೆ ಬರುತ್ತಲೇ ಪಾಲಿಕೆಯವರು ಕೆಲ ಶ್ವಾನಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡಿದ್ದರು. ಆದರೆ, ಶುಕ್ರವಾರ ತಡರಾತ್ರಿ ಯಾರೋ ಕಿಡಿಗೇಡಿಗಳು ಶ್ವಾನಗಳಿಗೆ ವಿಷ ಹಾಕಿದ್ದಾರೆ. ಇದರಿಂದ 15ಕ್ಕೂ ಹೆಚ್ಚು ಬೀದಿ ನಾಯಿಗಳು ಸಾವನಪ್ಪಿವೆ ಎಂದು ಸ್ಥಳೀಯರಾದ ಮಹೇಶ ಬಿದನೂರ ಆರೋಪಿಸಿದ್ದಾರೆ.

"ನಿನ್ನೆ ತಡ ರಾತ್ರಿ ಕೆಲ ಕಿಡಿಗೇಡಿಗಳು ಆಹಾರದಲ್ಲಿ ವಿಷ ಬೆರೆಸಿ ಶ್ವಾನಗಳಿಗೆ ಹಾಕಿದ್ದಾರೆ‌. ಇದನ್ನು ತಿಂದ 15ಕ್ಕೂ ಅಧಿಕ ಶ್ವಾನಗಳು ಸಾವನಪ್ಪಿವೆ‌. ಜೊತೆಗೆ ಹಲವು ಬೀದಿನಾಯಿಗಳು ಅಸ್ವಸ್ಥಗೊಂಡಿವೆ. ಇಂದು ಬೆಳಗಿನ ಜಾವ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪಶು ವೈದ್ಯರಿಗೆ ಮಾಹಿತಿ ನೀಡಿದ್ದು, ಅಸ್ವಸ್ಥಗೊಂಡ ನಾಯಿಗಳಿಗೆ ಇಂಜೆಕ್ಷನ್​ ನೀಡಿ ಜೀವ ಉಳಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಬೀದಿ ನಾಯಿಗಳನ್ನು ಬದುಕಿಸಲು ಸಾಕಷ್ಟು ಪ್ರಯತ್ನಪಟ್ಟೆವು ಎಂದು ತಿಳಿಸಿದರು.

ಅಲ್ಲದೇ ಇತ್ತೀಚೆಗೆ ಜುಮ್ಮಾ ಮಸೀದಿ ಪರಿಸರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ಕಳ್ಳರೇ ಶ್ವಾನಗಳಿಗೆ ವಿಷ ಉಣಿಸಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರಾತ್ರಿ ವೇಳೆ ಪೊಲೀಸ್​ ಗಸ್ತು ಹೆಚ್ಚಿಸಬೇಕೆಂದು ಎಂದು ಸ್ಥಳೀಯರು ಆಗ್ರಹಿಸಿದ್ದು, ಮೂಕ ಪ್ರಾಣಿಗಳಿಗೆ ವಿಷಪ್ರಾಶನ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದಕ್ಕೂ ಮುನ್ನ ವಿಜಯಪುರದಲ್ಲಿ ಅಪ್ರಾಪ್ತರ ಮೇಲೆ ಬೀದಿ ನಾಯಿ ದಾಳಿ ನಡೆಸಿತ್ತು. ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ :ವಿಜಯಪುರದಲ್ಲಿ ಅಪ್ರಾಪ್ತರ ಮೇಲೆ ಬೀದಿ ನಾಯಿ ದಾಳಿ: ಮೂವರಿಗೆ ಗಾಯ

ABOUT THE AUTHOR

...view details