ವಿಜಯಪುರ:ಸಾಮಾನ್ಯವಾಗಿ ಯಾರಾದ್ರೂ ತಪ್ಪು ಮಾಡಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ್ರೆ ಮಾತ್ರ ಕೈಗೆ ಕೋಳ ಬೀಳುತ್ತೆ. ಹಾಗೆ ಬೇಡಿ ತೊಟ್ಟು ಬಂಧನಕ್ಕೊಳಪಟ್ಟವರು ಜಾಮೀನಿನ ಮೇಲೆ ಬಿಡುಗಡೆಯಾಗಬಹುದು. ಆದ್ರೆ ಇಲ್ಲಿ ಒಮ್ಮೆ ಬೇಡಿ ಬಿದ್ರೆ ಮುಗೀತು. ಯಾವ ಕೋರ್ಟ್, ಕಚೇರಿ ಏನೂ ಮಾಡೋಕಾಗಲ್ಲ. ಇವರಿಗೆ ಬಿದ್ದ ಬೇಡಿ ಕಳಚಬೇಕಂದ್ರೆ ಆ ದೇವರ ಅಪ್ಪಣೆಯೇ ಆಗಬೇಕು.
ಹೌದು, ಅಚ್ಚರಿಯಾದರೂ ಇದು ಸತ್ಯ. ಇಂಥದ್ದೊಂದು ಸಂಪ್ರದಾಯವನ್ನು ನೂರಾರು ವರ್ಷಗಳಿಂದ ಸದ್ದಿಲ್ಲದೇ ಪಾಲಿಸಿಕೊಂಡು ಬರಲಾಗುತ್ತಿದೆ. ಇಲ್ಲಿನ ಕುಟುಂಬದಲ್ಲಿ ಮದುವೆಯಾದರೆ ಸಾಕು ಇಡೀ ಮನೆ ಮಂದಿಯೆಲ್ಲಾ ಕಾಲಿಗೆ ಕೋಳ ಹಾಕಿಕೊಳ್ತಾರೆ. ಕಬ್ಬಿಣದ ಸರಳುಗಳ ಕೋಳ ಕಳಚುವವರೆಗೂ ಇವರು ಮನೆಗೆ ಹೋಗದೆ ದೇವರ ಕೃಪೆಗಾಗಿ ಪ್ರಾರ್ಥನಾ ಮಂದಿರದಲ್ಲೇ ಇರಬೇಕು. ಮದುವೆಯಾದ ಬಳಿಕ ಇಡೀ ಕುಟುಂಬವೇ ಕಾಲಿಗೆ ಕೋಳ ಕಟ್ಟಿಕೊಂಡು ದೇವರ ಅಪ್ಪಣೆಗಾಗಿ ಕಾಯುವಂತಹ ವಿಚಿತ್ರ ಆಚರಣೆ ಇದು.
ಹೀಗೆ ಎರಡೂ ಕಾಲುಗಳಿಗೆ ಬೇಡಿ ತೊಟ್ಟ ಇವರೆಲ್ಲ ದೇವಸ್ಥಾನದಲ್ಲೇ ವಾಸ್ತವ್ಯ ಹೂಡಿದ್ದಾರೆ. ಕಳೆದ 15 ದಿನಗಳಿಂದ ಕಾಲಿಗೆ ಕಬ್ಬಿಣದ ಸಣ್ಣ ಸರಳಿನಿಂದ ಮಾಡಿದ ಬೇಡಿ ಕಟ್ಟಿಕೊಂಡು ದೇವಸ್ಥಾನದಲ್ಲೇ ಓಡಾಡುತ್ತಿದ್ದಾರೆ. ಬೇಡಿ ತನ್ನಿಂತಾನೆ ಕಳಚುವವರೆಗೂ ಮನೆಗೆ ಹೋಗುವಂತಿಲ್ಲ. ಇಂತಹ ವಿಚಿತ್ರ ಆಚರಣೆ ಕಂಡುಬಂದಿದ್ದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ. ಗ್ರಾಮದ ದಾವಲ್ಮಲಿಕ್ ಪ್ರಾರ್ಥನಾ ಮಂದಿರದ ಅರ್ಚಕರಾದ ಮುಜಾವರ್ ಕುಟುಂಬ ಸದ್ಯ ಬೇಡಿ ಹಾಕಿಕೊಂಡು ದೇವರ ಅಪ್ಪಣೆಗಾಗಿ ಕಾಯುತ್ತಿದೆ. ದಾವಲ್ಮಲಿಕ್ ಮುಸ್ಲಿಂ ದೇವರಾದರೂ ಇಲ್ಲಿ ಹಾಲುಮತ ಸಮುದಾಯದ ಮುಜಾವರ್ ಕುಟುಂಬದವರೇ ಅರ್ಚಕರಾಗಿದ್ದಾರೆ. ಈಗಾಗಲೇ 6 ಜನರ ಬೇಡಿ ಕಳಚಿದ್ದು, ಇನ್ನುಳಿದ 18 ಜನ ದೇವರ ಕೃಪೆಗಾಗಿ ಕಾಯುತ್ತಿದ್ದಾರೆ.
ಯಂಕಂಚಿ ಗ್ರಾಮದ ಮುಜಾವರ್ ಕುಟುಂಬ, ಕುಲಕರ್ಣಿ ಮತ್ತು ಗೌಡ್ರ ಸಮುದಾಯದಲ್ಲಿ ಈ ಬೇಡಿ ಸಂಪ್ರದಾಯ ಹಾಸು ಹೊಕ್ಕಾಗಿದೆ. ಮನೆಯಲ್ಲಿ ಗಂಡು ಮಕ್ಕಳಿಗೆ ಮದುವೆಯಾದರೆ ಮನೆ ಮಂದಿ ಎಲ್ಲಾ ಕೋಳ ಕಟ್ಟಿಕೊಂಡು ದಾವಲ್ ಮಲಿಕ್ ಪ್ರಾರ್ಥನಾ ಮಂದಿರದಲ್ಲೇ ವಾಸ್ತವ್ಯ ಹೂಡುತ್ತಾರೆ. ಬೇಡಿ ತನ್ನಿಂದ ತಾನೇ ಕಳಚುವವರೆಗೂ ಇಡೀ ಕುಟುಂಬ ದೇವಸ್ಥಾನ ತೊರೆಯಲ್ಲ. ಅದು ವಾರ, ತಿಂಗಳು, ಎಷ್ಟೇ ವರ್ಷವಾದರೂ ಸರಿ. ತಾವಾಗಿ ಬೇಡಿ ಬಿಚ್ಚುವಂತಿಲ್ಲ. ದೇವರೇ ಅದನ್ನು ಕಳಚಬೇಕಂತೆ!
ಇವರ ಕಾಲಿನ ಬೇಡಿ ಕಳಚಿ ಇವರು ಮನೆಗೆ ಹೋಗುವವರೆಗೂ ಇವರ ಮನೆಯಲ್ಲಿ ಸಂಬಂಧಿಕರು ಬಂದು ವಾಸವಿರುತ್ತಾರೆ. ಸಂಬಂಧಿಕರೇ ಜಾನುವಾರು, ಜಮೀನು ನೋಡಿಕೊಳ್ತಾರೆ. ಕಳೆದ ಮೇ 24ರಂದು ಮುಜಾವರ್ ಕುಟುಂಬದಲ್ಲಿ ಒಟ್ಟಿಗೆ ಎಂಟು ಯುವಕರ ಮದುವೆ ಮಾಡಲಾಯ್ತು. ಮದುವೆಯಾದ ಐದನೇ ದಿನಕ್ಕೆ ದೇವಸ್ಥಾನಕ್ಕೆ ಬಂದು ಗ್ರಾಮದ ಪಂಚಾಯಿತಿಯಿಂದ ಬೇಡಿ ಕಟ್ಟಿಸಿಕೊಳ್ಳಲಾಯ್ತು. ಹೆಣ್ಣುಮಕ್ಕಳಿಗೆ ಹೂವಿನಿಂದಾದ ಬೇಡಿ ಹಾಕಿದರೆ, ಇವರಿಗೆ ಕಬ್ಬಿಣದ ಬೇಡಿ ಹಾಕಲಾಯ್ತು. ಪ್ರತಿದಿನ ಬೆಳಗ್ಗೆ ಗ್ರಾಮದಲ್ಲಿ ಕೂತು ಭಿಕ್ಷೆ ಬೇಡಿಯೇ ಪ್ರಸಾದ ಸೇವಿಸಬೇಕು. ಹೀಗೆ ಬೇಡಿ ಹಾಕಿಕೊಂಡವರು ತಿಂಗಳ ಮೇಲೆ ಇಲ್ಲಿ ಇರುವುದಿಲ್ಲ. ಅಷ್ಟರೊಳಗೆ ಆ ಕಾಲ್ಕೋಳ ತನ್ನಿಂತಾನೇ ಕಳಚಲೇಬೇಕು. ಅದು ದೇವರ ಪವಾಡ ಎನ್ನುವುದು ಅರ್ಚಕರ ಬಲವಾದ ನಂಬಿಕೆ.