ಮುದ್ದೇಬಿಹಾಳ (ವಿಜಯಪುರ):ಲಾಕ್‌ಡೌನ್ ಸಡಿಲಿಕೆ ನಂತರ ಅನ್ಯ ರಾಜ್ಯಗಳ ಕಾರ್ಮಿಕರಿಗೆ ತೆರಳಲು ಸರ್ಕಾರ ಅನುಮತಿ ನೀಡಿದ್ದರಿಂದ ಗೋವಾದಲ್ಲಿರುವ ಸಾವಿರಾರು ಕಾರ್ಮಿಕರು ತಮ್ಮೂರುಗಳಿಗೆ ತೆರಳಲು ಕರ್ನಾಟಕ-ಗೋವಾ ಗಡಿಯಲ್ಲಿರುವ ಚೋರ್ಲಾಕೇರಿ ಚೆಕ್ಪೋಸ್ಟ್ನತ್ತ ಬರುತ್ತಿದ್ದಾರೆ.
ಹೀಗೆ ಬರುತ್ತಿರುವವರನ್ನು ಒಂದೆಡೆ ಕೂರಿಸಿ ಅವರನ್ನೆಲ್ಲಾ ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಾಯಿಸಿ ತಮ್ಮ ರಾಜ್ಯಕ್ಕೆ ಕಳಿಸಲು ಗೋವಾದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಇದರೊಂದಿಗೆ ಅಲ್ಲಿನ ಗೋವಾ ಕನ್ನಡಿಗರ ಪರ ಸಂಘಟನೆಗಳ ಹೋರಾಟಗಾರರು ಕಾರ್ಮಿಕರನ್ನು ಊರಿಗೆ ತಲುಪಿಸಲು ತಮ್ಮಿಂದಾದ ಸಹಕಾರ ನೀಡುತ್ತಿದ್ದಾರೆ.
ವಿಶೇಷವೆಂದರೆ, ಗೋವಾದ ಪೊಲೀಸರು ಕನ್ನಡಿಗ ಕಾರ್ಮಿಕರನ್ನು ತಮ್ಮ ಪೊಲೀಸ್ ಬಸ್‌ಗಳಲ್ಲಿ ಹತ್ತಿಸಿಕೊಂಡು ಕರ್ನಾಟಕದ ಗಡಿ ಭಾಗಕ್ಕೆ ತಂದು ಬಿಡುತ್ತಿದ್ದಾರೆ. ಸೋಮವಾರ ಚೋರ್ಲಾಕೇರಿ ಚೆಕ್ಪೋಸ್ಟ್ಗೆ ಭೇಟಿ ನೀಡಿದ್ದ ಉತ್ತರ ಗೋವಾ ಜಿಲ್ಲಾಧಿಕಾರಿ ಆರ್. ಮೇನಕಾ, ಪ್ರಿನ್ಸಿಪಲ್ ಸೆಕ್ರೆಟರಿ ಪುನೀತ್ ಗೋಯಲ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಕಾರ್ಮಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಗೋವಾ ಕನ್ನಡಪರ ಸಂಘಟನೆಯ ಮುಖಂಡರಾದ ಸಿದ್ದಣ್ಣ ಮೇಟಿ,ಶಂಭು ಶಟ್ಟರ್, ಹಣಮಂತ ಪರೆಡ್ಡಿ ವಿನಂತಿಸಿದ್ದಾರೆ. ಈ ಕುರಿತು ದೂರವಾಣಿಯ ಮುಖಾಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬಂದಿರುವ ಕಾರ್ಮಿಕರನ್ನು ತವರೂರಿಗೆ ಕಳಿಸಲು ನಾವೂ ಕೂಡಾ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಗೋವಾದ ಹಿರಿಯ ಅಧಿಕಾರಿಗಳು, ಸರ್ಕಾರ ಕನ್ನಡಿಗರ ಪರವಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಚೆಕ್ಪೋಸ್ಟ್ನಲ್ಲಿ ಬೀಡು:
ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಗೋವಾ - ಕರ್ನಾಟಕದದ ಚೋರ್ಲಾಕೇರಿ ಚೆಕ್ಪೋಸ್ಟ್ನಲ್ಲಿ ಬೀಡು ಬಿಟ್ಟಿದ್ದಾರೆ. ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಸೂಚನೆಯ ಮೇರೆಗೆ ಮುದ್ದೇಬಿಹಾಳ ತಾಲೂಕಿನ ಕಾರ್ಮಿಕರನ್ನು ಕರೆತರಲು ಅಲ್ಲಿಗೆ ತೆರಳಿದ್ದು, ಕಾರ್ಮಿಕರ ಹೆಸರನ್ನು ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಾಯಿಸಿ ಮುದ್ದೇಬಿಹಾಳಕ್ಕೆ ಬಸ್‌ನಲ್ಲಿ ಕರೆತರುತ್ತಿದ್ದಾರೆ.