ವಿಜಯಪುರ: ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಹೀಗಿದ್ದರೂ ಗುಮ್ಮಟನಗರಿ ವಿಜಯಪುರದಲ್ಲಿ ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿ ಆಯೋಜಿಸಲಾಗಿತ್ತು. ಎರಡು ದಿನಗಳ ಕಾಲ ನಡೆಯಲಿರುವ ಖೋ ಖೋ ಪಂದ್ಯಾವಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಎಂಎಲ್ಸಿ ಸುನೀಲ್ಗೌಡ ಪಾಟೀಲ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ರಾಜ್ಯಮಟ್ಟದ ಖೋ ಖೋ ಆಯೋಜನೆ:ನಗರದ ಬಿಎಲ್ಡಿಇ ಮೆಡಿಕಲ್ ಕಾಲೇಜ್ ಆವರಣದ ಮೈದಾನದಲ್ಲಿ ಬಿಎಲ್ಡಿಇ ಸಂಸ್ಥೆ ಹಾಗೂ ಎಸ್ಎಸ್ ಪದವಿಪೂರ್ವ ಕಾಲೇಜು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ಖೋ ಖೋ ಪಂದ್ಯಾವಳಿ ಆಯೋಜಿಸಲಾಗಿತ್ತು.
ಏಕ ಕಾಲದಲ್ಲಿ ಆರು ಪಂದ್ಯಾವಳಿಗಳು: ಬೆಳಗ್ಗೆಯಿಂದ ಆರಂಭವಾದ ಖೋ ಖೋ ಪಂದ್ಯಾವಳಿಗಳು ನೋಡುಗರನ್ನು ರೋಮಾಂಚನಗೊಳಿಸಿತು. ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಿಂದ 32 ಬಾಲಕ ಹಾಗೂ 32 ಬಾಲಕಿಯರ ತಂಡಗಳು ಸೇರಿ 863 ಕ್ರೀಡಾಪಟುಗಳು ಹಾಗೂ 80 ಕೋಚ್ಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.