ಕರ್ನಾಟಕ

karnataka

ETV Bharat / state

ರಾಜ್ಯಮಟ್ಟದ ಸೈಕ್ಲಿಂಗ್​ ಸ್ಪರ್ಧೆ... 3 ಚಿನ್ನದ ಪದಕ ಗೆದ್ದ ಬಾಗಲಕೋಟೆಯ ಗ್ರಾಮೀಣ ಪ್ರತಿಭೆ!

ಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ 15ನೇ ಮೌಂಟನ್ ಬೈಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಹಳ್ಳಿ ಹುಡುಗಿಯೊಬ್ಬಳು ಮೂರು ಚಿನ್ನ ಗೆದ್ದು ಅಪರೂಪದ ಸಾಧನೆ ಮಾಡಿದ್ದಾಳೆ. ಮುಂದಿನ ತಿಂಗಳು ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ಮೌಂಟನ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹದಲ್ಲಿರುವ ಸೌಮ್ಯ, ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಸಹಾಯದ ನಿರೀಕ್ಷೆಯಲ್ಲಿದ್ದಾಳೆ.

By

Published : Sep 15, 2019, 9:01 PM IST

3 ಚಿನ್ನದ ಪದಕ ಗೆದ್ದ ಬಾಗಲಕೋಟೆಯ ಗ್ರಾಮೀಣ ಪ್ರತಿಭೆ

ವಿಜಯಪುರ: ಅಪ್ಪಟ ಹಳ್ಳಿ ಪ್ರತಿಭೆಯೊಬ್ಬಳು ಸೈಕ್ಲಿಂಗ್​​ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ವಿಭಾಗದಲ್ಲಿ ಮೂರು ಚಿನ್ನದ ಪದಕ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.

ವಿಜಯಪುರ ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ 15ನೇ ಮೌಂಟನ್ ಬೈಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಮೂರು ವಿಭಾಗದಲ್ಲಿ ಮೂರು ಚಿನ್ನದ ಪದಕ ಗಳಿಸಿ, ಸೌಮ್ಯ ಅಂತಾಪುರ ಅಪರೂಪದ ಸಾಧನೆ ಮಾಡಿದ್ದಾಳೆ.

ಬಾಗಲಕೋಟೆ ಜಿಲ್ಲೆಯ ಛಬ್ಬಿ ಗ್ರಾಮದವರಾದ ಸೌಮ್ಯ, ವಿಜಯಪುರದಲ್ಲಿ ನಡೆದ ಮೌಂಟನ್ ಸೈಕಲ್ ಚಾಂಪಿಯನ್​ಷಿಪ್​ನಲ್ಲಿ ಲ್ಯಾಪ್ 1ರ ವೈಯಕ್ತಿಕ ಟೈಮ್ ಟ್ರಾಯಲ್​ನಲ್ಲಿ ಕೇವಲ 11.14 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಚಿನ್ನ ಬಾಚಿದ್ದಾಳೆ. ಇನ್ನು 18 ವರ್ಷದ ಒಳಗಿನ ಲ್ಯಾಪ್​ 1ರ ವೈಯಕ್ತಿಕ ಟೈಮ್ ಟ್ರಯಲ್ ವಿಭಾಗದಲ್ಲಿ 11.09 ಸೆಕೆಂಡ್​ನಲ್ಲಿ ಗುರಿ ತಲುಪಿ ಚಿನ್ನಕ್ಕೆ ಮುತ್ತಿಕ್ಕಿದ್ದಅಳೆ. ಇದರ ಜತೆ ಲ್ಯಾಪ್ 2ರ ವೈಯಕ್ತಿಕ ಟೈಮ್ ಟ್ರಯಲ್​ನಲ್ಲಿ 24.59 ಸೆಕೆಂಡ್​ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಬಾಚಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.

3 ಚಿನ್ನದ ಪದಕ ಗೆದ್ದ ಬಾಗಲಕೋಟೆಯ ಗ್ರಾಮೀಣ ಪ್ರತಿಭೆ

ಸಾಧನೆಯ ಹಿಂದೆ ತಂದೆ...

ಸೌಮ್ಯ ಅಂತಾಪುರ ಸಾಧನೆ ಹಿಂದೆ ಅವರಿಗೆ ಬೆನ್ನೆಲುಬಾಗಿ ತಂದೆ ಚಿದಾನಂದ ಅಂತಾಪುರ ನಿಂತಿದ್ದಾರೆ. ಕೇವಲ 6 ವರ್ಷಗಳ ಹಿಂದೆಯಷ್ಟೆ ಸೈಕ್ಲಿಸ್ಟ್​​​​​ ಆಗಬೇಕೆಂದು ಹಟ ತೊಟ್ಟು, ಅಭ್ಯಾಸ ಆರಂಭಿಸಿದ ಸೌಮ್ಯಗೆ ಕುಟುಂಬ ವರ್ಗ ಮಾತ್ರವಲ್ಲದೇ ಕೋಚ್​ಗಳು ಮಾಡಿದ ಪ್ರೋತ್ಸಾಹವೇ ಇಂದಿನ ಸಾಧನೆಗೆ ಕಾರಣವಂತೆ.

ಕೃಷಿಕನಾಗಿರೋ ತಂದೆ ಚಿದಾನಂದ, ಮಗಳ ಸೈಕಲ್ ಪ್ರೀತಿ ನೋಡಿ ಸಾಲ ಮಾಡಿ ರೋಡ್ ಟ್ರ್ಯಾಕಿಂಗ್ ಸೈಕಲ್ ಕೊಡಿಸಿದ್ದರು. ಅದರ ಮೇಲೆ ಸತತ ಪ್ರಾಕ್ಟೀಸ್​ ಮಾಡಿ ಇಂದು ಮೂರು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾಳೆ ಸೌಮ್ಯ. ಆದರೆ ಬಡತನದ ಹಿನ್ನೆಲೆ ಹೊಂದಿರುವ ಸೌಮ್ಯಗೆ ಮೌಂಟನ್ ಸೈಕ್ಲಿಂಗ್​​ ಸ್ಪರ್ಧೆಯಲ್ಲಿ ಭಾಗವಹಿಸಲು ಆಧುನಿಕ ಸೈಕಲ್ ಇಲ್ಲದ ಕಾರಣ ಸರಿಯಾಗಿ ಅಭ್ಯಾಸ ಮಾಡಲು ಆಗುತ್ತಿಲ್ಲ. ಮೌಂಟನ್ ಸೈಕ್ಲಿಂಗ್​​ ಸ್ಪರ್ಧೆ ಇದ್ದಾಗ ಸೈಕ್ಲಿಂಗ್​​ ಅಸೋಸಿಯೇಷನ್ ಅವರು ಒಂದು ವಾರ ಮುಂಚೆ ನೀಡುವ ಸೈಕಲ್ಅನ್ನೇ ಅವಲಂಬಿಸಬೇಕಾಗಿದೆ.

ಮುಂದಿನ ತಿಂಗಳು ಪುಣೆಯಲ್ಲಿ ನಡೆಯಲಿರುವ ಮೌಂಟನ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹದಲ್ಲಿರುವ ಸೌಮ್ಯ, ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಸಹಾಯದ ನಿರೀಕ್ಷೆಯಲ್ಲಿದ್ದಾಳೆ.

ABOUT THE AUTHOR

...view details