ವಿಜಯಪುರ: ಇಲ್ಲಿನ ಜ್ಞಾನಯೋಗಾಶ್ರಮದ ಸಿದ್ದೇಶ್ವರ್ ಶ್ರೀಗಳಿಗೆ ಉಸಿರಾಟ ಸಮಸ್ಯೆ ಇರುವುದರಿಂದ ಆಕ್ಸಿಜನ್ ನೀಡಲಾಗುತ್ತಿದೆ. ರಕ್ತದ ಒತ್ತಡದಲ್ಲಿ ಸ್ವಲ್ಪ ಏರುಪೇರಾಗಿದೆ. ಚಿಕಿತ್ಸೆಗೆ ಬೇಕಾದ ಮೆಡಿಕಲ್ ಮಟಿರಿಯಲ್ಸ್ ಅನ್ನು ಸನ್ನದ್ಧವಾಗಿ ಇಟ್ಟುಕೊಳ್ಳಲಾಗಿದೆ, ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಸ್ವಾಮೀಜಿ ಬೆಳಗ್ಗೆ ಗಂಜಿ ಕುಡಿದಿದ್ದರು ಅಷ್ಟೆ. ಅದಾದ ನಂತರ ಆಹಾರ ಸೇವಿಸಿಲ್ಲ. ಆಸ್ಪತ್ರೆಗೆ ಹೋಗುವುದಕ್ಕೆ ನಿರಾಕರಣೆ ಮಾಡುತ್ತಿದ್ದಾರೆ. ಅವರ ಅಣತಿಯಂತೆ ನಾವು ನಡೆಯುತ್ತಿದ್ದೇವೆ. ಶ್ರೀಗಳ ಕೈಕಾಲುಗಳಲ್ಲಿ ಚಲನವಲನ ಇದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಎಸ್ ಬಿ ಪಾಟೀಲ್ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದ್ದಾರೆ.
ಅನ್ನದಾಸೋಹಕ್ಕೆ ವ್ಯವಸ್ಥೆ: ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಆತಂಕಗೊಂಡಿರುವ ಸಾವಿರಾರು ಭಕ್ತರು, ಅಭಿಮಾನಿಗಳು ಜ್ಞಾನಯೋಗಾಶ್ರಮದತ್ತ ಧಾವಿಸುತ್ತಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಆಶ್ರಮದ ಆವರಣದಲ್ಲಿಯೇ ತಂಗಿದ್ದಾರೆ. ಅನ್ಯ ರಾಜ್ಯದಿಂದಲೂ ಜನರು ಬರುತ್ತಿದ್ದಾರೆ. ಆಶ್ರಮದ ಆಡಳಿತ ಮಂಡಳಿ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಿದೆ. ಅನೇಕ ಭಕ್ತಾದಿಗಳು ಶ್ರೀಗಳು ಬೇಗ ಗುಣಮುಖರಾಗಲೆಂದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಆಶ್ರಮದ ಸುತ್ತ ಪೊಲೀಸ್ ಭದ್ರತೆ: ಆಶ್ರಮದ ಸುತ್ತಮುತ್ತ ಪೊಲೀಸ್ ಇಲಾಖೆ ವಿಶೇಷ ಭದ್ರತೆ ಕೈಗೊಂಡಿದೆ. ಗದಗ, ಬಾಗಲಕೋಟೆ ಜಿಲ್ಲೆಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡಿಎಸ್ಪಿ-5, ಸಿಪಿಐ-20, ಪಿಎಸ್ಐ-50, ಎಎಸ್ಐ -100, ಸಿಎಚ್ಸಿ-ಸಿಪಿಸಿ 1,000 ಸಿಬ್ಬಂದಿಯ ವ್ಯವಸ್ಥೆ ಮಾಡಲಾಗಿದೆ.
ಸಿದ್ದರಾಮಯ್ಯ ಆಗಮನ:ಮಾಜಿ ಸಿಎಂ ಸಿದ್ದರಾಮಯ್ಯ ವಿಶೇಷ ಹೆಲಿಕಾಪ್ಟರ್ ಮೂಲಕ ಇಂದು ವಿಜಯಪುರ ನಗರದ ಸೈನಿಕ ಶಾಲೆಗೆ ಬಂದು ಅಲ್ಲಿಂದ ನೇರವಾಗಿ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ, ಶ್ರೀಗಳ ಆರೋಗ್ಯd ಬಗ್ಗೆ ವಿಚಾರಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳು ನಾಡು ಕಂಡ ಮಹಾನ ಸಂತರು. ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ. ಸದ್ಯ ಅವರು ಆಕ್ಷಿಜನ್ ಮೂಲಕ ಉಸಿರಾಡುತ್ತಿದ್ದಾರೆ. ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.