ವಿಜಯಪುರ:ನಾನು ಬಿಜೆಪಿ ಪಕ್ಷದ ಕಟ್ಟಾ ಬೆಂಬಲಿಗ. ಸಚಿವ ಸ್ಥಾನ ಸಿಗದಿದ್ದರೂ ನಾನು ಪಕ್ಷ ಬಿಡುತ್ತಿರಲಿಲ್ಲ ಎಂದು ಡಿಕೆಶಿ ಹೇಳಿಕೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದರು.
ವಿಜಯಪುರದಲ್ಲಿ ಮಾತನಾಡಿ, ಮೈತ್ರಿ ಸರ್ಕಾರ ಪತನ ವೇಳೆ ಶ್ರೀರಾಮುಲು ಡಿಸಿಎಂ ಆಗುವುದಿಲ್ಲ ಎಂದು ಡಿಕೆಶಿ ಹೇಳಿದ್ದರು. ಆದರೆ ಸಚಿವ ಸ್ಥಾನ ಸಿಗದಿದ್ದರೂ ನಾನು ಬಿಜೆಪಿಯಲ್ಲೇ ಇರುತ್ತೇನೆ. ನಮ್ಮ ಸರ್ಕಾರ ಉತ್ತಮ ಕೆಲಸ ಮಾಡುತ್ತದೆ. ಪ್ರವಾಹ ಸಂತ್ರಸ್ಥರಿಗೆ ಪರಿಹಾರ ನೀಡುತ್ತದೆ ಎಂದರು.
ಆರೋಗ್ಯ ಸಚಿವ ಬಿ.ಶ್ರೀರಾಮುಲು ಇಡಿ ಹಾಗೂ ಕೇಂದ್ರ ಸರ್ಕಾರ ನನ್ನ ರಕ್ತ ಹೀರಿದೆ ದೇಹ ಮಾತ್ರ ಉಳಿದಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಮುಲು, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನು ಬಾಹಿರ ಕೃತ್ಯ ಮಾಡಿದವರಿಗೆ ಶಿಕ್ಷೆಯಾಗಲಿದೆ. ಉಪ್ಪು ತಿಂದವರು ನೀರು ಕುಡಿಯಬೇಕು. ತಪ್ಪು ಮಾಡದಿದ್ದರೆ ಭಯ ಏಕೆ. ಡಿಕೆಶಿಯವರ ರಾಜಕೀಯ ಬೇರೆ, ವ್ಯವಹಾರವೇ ಬೇರೆ. ಎರಡಕ್ಕೂ ಸಂಬಂಧವಿಲ್ಲ. ಡಿಕೆಶಿ ಕುರಿತ ಇಡಿ ತನಿಖೆಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದರು.
ಇನ್ನು ಇದೇ ವೇಳೆ, ಮಾಜಿ ಸಿಎಂ ಕುಮಾರಸ್ವಾಮಿ ಮಲೇಷಿಯಾದಲ್ಲಿ ಮೋಜು ಮಸ್ತಿ ಜೂಜಾಟ ಆಡಿರುವ ಆರೋಪದ ಕುರಿತು ಮಾತನಾಡಿದ ಅವರು, ಯಾರೇ ಆಗಲಿ ವಿದೇಶಕ್ಕೆ ಹೋದರೂ ದೇವರು ಮೆಚ್ಚುವ ಕೆಲಸ ಮಾಡಬೇಕು ಎಂದ ಹೇಳಿದರು.