ವಿಜಯಪುರ: ಬಸನಗೌಡ ಪಾಟೀಲ್ ಯತ್ನಾಳ ಅವರ ಧೈರ್ಯ ಮೆಚ್ಚುವಂಥದ್ದು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಅವರು ಮೊದಲು ಧ್ವನಿ ಎತ್ತುತ್ತಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪಕ್ಷ ಮೀರಿ ಈ ಭಾಗದ ರಕ್ಷಣೆ ಮಾಡಲು ಯತ್ನಾಳ ಶ್ರಮಿಸುತ್ತಾರೆ. ಅವರನ್ನು ನಾನು ಮುಕ್ತ ಕಂಠದಿಂದ ಹೊಗಳುತ್ತೇನೆ ಎನ್ನುವ ಮೂಲಕ, ಯತ್ನಾಳ ಬೆಂಬಲಕ್ಕೆ ಕಾಂಗ್ರೆಸ್ ನಿಲ್ಲುವ ಮೂಲಕ ರಾಜಕೀಯ ಚದುರಂಗದಾಟಕ್ಕೆ ನಾವು ಸಿದ್ದವೆಂದು ಪರೋಕ್ಷವಾಗಿ ಹೇಳಿಕೆ ನೀಡಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಇನ್ನು ಸಿಡಿ ಬಾಂಬ್ ಬಗ್ಗೆ ನನ್ನ ಕೇಳಬೇಡಿ, ಕೈ ಮುಗಿಯುತ್ತೇನೆ ಎಂದು ಸುದ್ದಿಗಾರರ ಎದುರೇ ಕೈ ಜೋಡಿಸಿ ಮನವಿ ಮಾಡಿದರು. ಯತ್ನಾಳ ಅವರಂತೆ ನಾನು ಸಹ ಪಕ್ಷ ಮೀರಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದರೆ ಧ್ವನಿ ಎತ್ತುವೆ. ಏಕೆಂದರೆ ನನಗೆ ವಿಜಯಪುರ-ಬಾಗಲಕೋಟೆ ಜನ ಮತ ಹಾಕಿದ್ದಕ್ಕೆ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಅವರ ಬೆಂಬಲಕ್ಕೆ ನಿಲ್ಲುವದು ನನ್ನ ಕರ್ತವ್ಯ ಎಂದರು.
ಸಿಡಿ ತೋರಿಸಿ ಸಿಎಂರನ್ನು ಬ್ಲಾಕ್ ಮೇಲ್ ಮಾಡುವದು ಪ್ರಜಾಪ್ರಭುತ್ವದ ಕಗ್ಗೊಲೆ. ತಕ್ಷಣ ಸರ್ಕಾರ ಈ ಪ್ರಕರಣದ ಸತ್ಯಾಸತ್ಯತೆ ಅರಿಯಲು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.