ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಎರಡನೇ ಡೋಸ್ ವ್ಯಾಕ್ಸಿನ್‌ ಹಾಕಿಸಿಕೊಳ್ಳದಿದ್ರೂ ಬಂತು ಪ್ರಮಾಣಪತ್ರ!

ಕೋವಿಡ್​ ವ್ಯಾಕ್ಸಿನ್​​ನ ಎರಡನೇ ಡೋಸ್​​ ಹಾಕಿಸಿಕೊಳ್ಳದವರೂ ಲಸಿಕೆ ಪಡೆದಿರುವುದಾಗಿ ಮೆಸೇಜ್​​ಗಳು ಬಂದಿವೆ.

vaccine
ವ್ಯಾಕ್ಸಿನ್​

By

Published : Oct 20, 2021, 10:19 AM IST

ಮುದ್ದೇಬಿಹಾಳ: ಕೋವಿಡ್​ ವ್ಯಾಕ್ಸಿನ್​ನ ಎರಡನೇ ಡೋಸ್​​ ಹಾಕಿಸಿಕೊಳ್ಳದಿದ್ದರೂ, ನೀವು ಎರಡನೇ ಡೋಸ್ ಹಾಕಿಸಿಕೊಂಡಿದ್ದು ಯಶಸ್ವಿಯಾಗಿದೆ. ನಿಮ್ಮ ಪ್ರಮಾಣ ಪತ್ರವನ್ನು ಡೌನ್​​ಲೋಡ್ ಮಾಡಿಕೊಳ್ಳಿ ಎಂದು ಹಲವರ ಮೊಬೈಲ್ ನಂಬರ್​ಗೆ ಸಂದೇಶಗಳು ಬಂದಿವೆ.

ವ್ಯಾಕ್ಸಿನ್ ಪಡೆದಿರುವುದಾಗಿ ಮೊಬೈಲ್‌ಗೆ ಬಂದಿರುವ ಮೆಸೇಜ್​

ಕೋವಿಡ್​ ತೊಲಗಿಸಲು ಸರ್ಕಾರ, ಆರೋಗ್ಯ ಇಲಾಖೆ, ಕೊರೊನಾ ವಾರಿಯರ್ಸ್ ಅವಿರತವಾಗಿ​ ಶ್ರಮಿಸುತ್ತಿದ್ದಾರೆ. ಆದ್ರೆ ಇಲಾಖೆಯ ಮೇಲಧಿಕಾರಿಗಳ ಒತ್ತಡವೋ, ನೀಡಿದ ಗುರಿ ಸಾಧನೆ ತೋರ್ಪಡಿಸಲು ಮಾಡುವ ಕೃತಕ ದಾಖಲೆಗಳ ಪ್ರದರ್ಶನವೋ, ಅರ್ಥವಾಗದಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ.

ಮುದ್ದೇಬಿಹಾಳ ಪಟ್ಟಣದ ನಿವಾಸಿ ಈಶ್ವರಪ್ಪ ಹೆಬ್ಬಾಳ ಅವರು ಜೂ.8ರಂದು ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸ್ ಹಾಕಿಸಿಕೊಂಡಿದ್ದರು. ಮೂರು ತಿಂಗಳ ಅಂತರದ ನಂತರ ಎರಡನೇ ಡೋಸ್ ಹಾಕಿಸಿಕೊಳ್ಳಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಲಸಿಕೆ ಹಾಕಿಸಿಕೊಂಡಿರಲಿಲ್ಲ. ಆದರೆ ನಿನ್ನೆ ಅವರ ಮೊಬೈಲ್‌ ನಂಬರ್​ಗೆ ಸಂದೇಶ ಬಂದಿದ್ದು, ಎರಡನೇ ಡೋಸ್ ಲಸಿಕೆ ಹಾಕಿರುವುದು ಯಶಸ್ವಿಯಾಗಿದೆ ಎಂದು ತಿಳಿಸಲಾಗಿದೆ.

ವ್ಯಾಕ್ಸಿನ್​ ಪ್ರಮಾಣಪತ್ರ

ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ ಅವರನ್ನು ಸಂಪರ್ಕಿಸಲಾಗಿದ್ದು, 'ಇದು ಕಂಪ್ಯೂಟರ್ ಆಪರೇಟರ್‌ಗಳು ದಾಖಲೆಗಳನ್ನು ಅಪ್‌ಲೋಡ್ ಮಾಡುವಾಗ ಆಗಿರುವ ಸಮಸ್ಯೆ. ಇದನ್ನು ಸರಿಪಡಿಸಲಾಗುತ್ತದೆ. ಅವರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ. ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು' ಎಂದು ತಿಳಿಸಿದರು.

ಮುದ್ದೇಬಿಹಾಳದ ನಿವಾಸಿ ಚೇತನ್ ಕೆಂಧೂಳಿ, 'ನಾನು ಬಾಗಲಕೋಟೆಯಲ್ಲಿದ್ದರೂ ಲಸಿಕೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಹಾಕಿಸಿಕೊಂಡಿದ್ದೇನೆ ಎಂದು ಸಂದೇಶ ಕಳುಸಿದ್ದರು. ಈ ರೀತಿಯ ಪ್ರಮಾದಗಳಿಂದ ಸಾರ್ವಜನಿಕರು ಗೊಂದಲಕ್ಕೊಳಗಾಗುತ್ತಾರೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಹೇಳಿದರು.

ಇದನ್ನೂ ಓದಿ:Karnataka Weather Report: ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಮುಂದುವರೆಯಲಿದೆ ವರ್ಷಧಾರೆ

ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಪ್ರತಿಕ್ರಿಯಿಸಿ, 'ಈ ರೀತಿಯ ತಪ್ಪುಗಳು ಆಗಾಗ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಇದು ಸ್ಥಳೀಯ ಸಿಬ್ಬಂದಿಯ ತಪ್ಪು. ಮತ್ತೊಮ್ಮೆ ಹೀಗೆ ಆಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು. ಮುಂದೆ ಸರಿಯಾಗಿ ಮೊಬೈಲ್ ಸಂಖ್ಯೆಗಳನ್ನು ದಾಖಲಿಸುವ ಸೂಚನೆ ನೀಡುತ್ತೇನೆ' ಎಂದು ಹೇಳಿದರು.

ABOUT THE AUTHOR

...view details