ಮುದ್ದೇಬಿಹಾಳ: ಪಟ್ಟಣದ ಪ್ರಾಚೀನ ಕಾಲದ ಇತಿಹಾಸ ಹೊಂದಿರುವ ಕಿಲ್ಲಾ ಗಲ್ಲಿಯ ಹೆಸರು ಪುರಸಭೆಯ ದಾಖಲೆಗಳಲ್ಲಿ ರದ್ದುಗೊಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಿವಾಸಿಯೊಬ್ಬರು ಏಕಾಂಗಿಯಾಗಿ ಪುರಸಭೆಯ ಎದುರಿಗೆ ಬುಧವಾರ ದಿಢೀರ್ ಧರಣಿ ಆರಂಭಿಸಿದ್ದಾರೆ.
ಪಟ್ಟಣದ ಕಿಲ್ಲಾ ಗಲ್ಲಿಯ ನಿವಾಸಿ ಉದಯ ರಾಯಚೂರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದವರು. ಪ್ರಾಚೀನ ಕಾಲದ ಈಶ್ವರಲಿಂಗ ದೇವಸ್ಥಾನ ಇದೆ. ಪ್ರಾಚೀನ ಲಕ್ಷ್ಮಿಬಾವಿ ಹಾಗೂ ಕೋಟೆ ಗೋಡೆಯೂ ಇದೆ. ಊರ ಅಗಸಿ ಬಾಗಿಲು ಹೊಂದಿದ್ದು, ಕಳೆದ 2017ರಿಂದ ಪುರಸಭೆಯ ದಾಖಲೆಗಳಲ್ಲಿ ಈ ಓಣಿಯ ಹೆಸರನ್ನೇ ರದ್ದು ಮಾಡಲಾಗಿದೆ.
ಅಲ್ಲದೇ ಕಿಲ್ಲಾದ ಓಣಿಯ ವಿಷಯ ಬಂದರೆ ಮೂಲಸೌಕರ್ಯಗಳ ಕೊರತೆಯೂ ಕಾಡುತ್ತಿದೆ. ಬೀದಿ ದೀಪ ಇಲ್ಲ, ಚರಂಡಿಗಳನ್ನು ಸರಿಯಾಗಿ ಶುಚಿಗೊಳಿಸುವುದಿಲ್ಲ. ಎಲ್ಲ ವಿಷಯಗಳಲ್ಲೂ ಕಿಲ್ಲಾವನ್ನು ಕಡೆಗಣಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.