ವಿಜಯಪುರ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇಂಡಿ ತಾಲೂಕು ಲಚ್ಯಾಣ ಗ್ರಾಮದ ಯೋಧ ರಾಜಶೇಖರ ಶರಣಪ್ಪ ಮುಜಗೊಂಡ (36)ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಪರಿಣಾಮ ಶುಕ್ರವಾರ ಬೆಳಗ್ಗೆ ಕೊನೆ ಉಸಿರೆಳೆದಿದ್ದಾರೆ. ಜಮ್ಮು ಕಾಶ್ಮೀರದ ಝಡಗಲ್ಲಿ ಪಾಯಿಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ತೀವ್ರ ಹಿಮದ ಚಳಿಯ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದರಿಂದಾಗಿ ಅವರು ಪುಣೆಯ ಭಾರತೀಯ ಸೇನಾ ಆಸ್ಪತ್ರೆಗೆ ದಾಖಲಾಗಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಪರಿಣಾಮ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಗ್ರಾಮದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದ ರಾಜಶೇಖರ 2010ರಲ್ಲಿ ಮದ್ರಾಸ್ ರೆಜಿಮೆಂಟ್‌ನಲ್ಲಿ ಸೇನೆಗೆ ಸೇರಿ ತರಬೇತಿ ಪಡೆದಿದ್ದರು. ತರಬೇತಿ ಮುಗಿಸಿ ಜಮ್ಮು ಕಾಶ್ಮೀರದ ಝಡಗಲ್ಲಿ ಪಾಯಿಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ತೀವ್ರ ಹಿಮಗಾಳಿಯ ಕಾರಣದಿಂದ ಅನಾರೋಗ್ಯ: ಅಲ್ಲಿ ತೀವ್ರ ಹಿಮಗಾಳಿ ಕಾರಣದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ರಜೆ ಪಡೆದು ಮನೆಗೆ ಬಂದು ಚೇತರಿಸಿ ಕೊಂಡಿದ್ದರು. ಮತ್ತೆ ದೇಶ ಸೇವೆಗೆ ಅಣಿಯಾಗಿದ್ದ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗೆ ಮಹಾರಾಷ್ಟ್ರದ ಪುಣೆಯ ಭಾರತೀಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಅವರು ಕೊನೆ ಉಸಿರೆಳೆದಿದ್ದಾರೆ.
ಇದನ್ನೂಓದಿ:ಪ್ರತ್ಯೇಕ ಘಟನೆಗಳಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ಯೋಧರು ಸಾವು; ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ