ವಿಜಯಪುರ: ಭೀಮಾತೀರದಲ್ಲಿ ಮತ್ತೆ ಗುಂಡಿನ ದಾಳಿ ಸದ್ದು ಮಾಡಿದೆ. ಭೀಮಾತೀರದ ಹಂತಕ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣ ಕೊಲೆಗೆ ಮತ್ತೆ ಪ್ರತಿಕಾರದ ಮಾತು ನಿನ್ನೆ ನಡೆದ ಗುಂಡಿನ ದಾಳಿಯಿಂದ ಕೇಳಿ ಬಂದಿದೆ. ಸಾಹುಕಾರ ಹತ್ಯೆಗೆ ಸಂಚಿನ ಹಿಂದೆ ಮಹಾರಾಷ್ಟ್ರದ ಗ್ಯಾಂಗ್ಸ್ಟರ್ಗಳ ಕೈವಾಡವಿರುವ ಮಾಹಿತಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಲಭ್ಯವಾಗಿದೆ.
ಮುಂಬೈ ಗ್ಯಾಂಗಸ್ಟರ್ಗಳ ಮೂಲಕ ಸಾಹುಕಾರ ಹತ್ಯೆಗೆ ಸ್ಕೆಚ್ ಭೀಮಾನದಿ ತೀರದಲ್ಲಿ ಚಡಚಣ ಹಾಗೂ ಭೈರಗೊಂಡ ಕುಟುಂಬಗಳ ದ್ವೇಷ ನಿನ್ನೆ ಮೊನ್ನೆಯದ್ದಲ್ಲ ದಶಕಗಳ ಹಗೆತನವಿದೆ. ಧರ್ಮರಾಜ್ ಚಡಚಣ ಎನ್ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ಕೊಲೆ ಹಿಂದೆ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಕೈವಾಡವಿರುವುದು ಪೊಲೀಸ್ ತನಿಖೆಯಿಂದ ಗೊತ್ತಾದ ಮೇಲೆ ಚಡಚಣ ಸಹಚರರು ಭೈರಗೊಂಡ ಮೇಲೆ ದ್ವೇಷ ಸಾಧಿಸುತ್ತಲೇ ಬಂದಿದ್ದಾರೆ. ನಿನ್ಮೆ ನಡೆದ ಭೈರಗೊಂಡ ಮೇಲಿನ ದಾಳಿ ವ್ಯವಸ್ಥಿತ ಸಂಚು ಎನ್ನುವದು ಪೊಲೀಸರ ಪ್ರಾಥಮಿಕ ಮಾಹಿತಿಯಾಗಿದೆ.
ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದಿಂದ ಬಂದಿದ್ದ ಗ್ಯಾಂಗ್ಸ್ಟರ್ಗಳು ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ದಾಳಿ ನಡೆಸಿದ್ದಾರೆ. ಕನ್ನಾಳ ಕ್ರಾಸ್ ಬಳಿ ಹೊಂಚು ಹಾಕಿ ಟಿಪ್ಪರ್ ಲಾರಿಯಿಂದ ಸಾಹುಕಾರ ಕಾರು ಡಿಕ್ಕಿ ಹೊಡೆಸಿ ಏಕಾಏಕಿ 23-30 ವರ್ಷದ ಯುವಕರು ಪಕ್ಕದ ತೊಗರಿ ಹೊಲದಿಂದ ಬಂದು ದಾಳಿ ನಡೆಸಿದ್ದಾರೆ. ಇದನ್ನು ತಡೆಯಲು ಹೋದ ಸಾಹುಕಾರ ಬೆಂಬಲಿಗ ಬಾಬುರಾವ್ ಹಾಗೂ ಕಾರು ಚಾಲಕನ ಮೇಲೆ ಮೊದಲು ಗುಂಡಿನ ದಾಳಿ ನಡೆದಿದೆ. ನಂತರ ಸಾಹುಕಾರ ಮೇಲೆ ಸಹ ಗುಂಡಿನ ದಾಳಿ ನಡೆದಿದೆ. ಜತೆಗೆ ಪೆಟ್ರೋಲ್ ಬಾಂಬ್ ಸಹ ಉಪಯೋಗಿಸಲಾಗಿದೆ. ಇದರಲ್ಲಿ ಬಾಬುರಾವ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಸಾಹುಕಾರಗೆ ಚಿಕಿತ್ಸೆ ಮುಂದುವರೆದಿದೆ. ಕಾರು ಚಾಲಕ ಲಕ್ಷ್ನಣ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ದಾಳಿಗೆ ಚಡಚಣ ಸಹೋದರರ ಹತ್ಯೆಯ ಮೇಲಿನ ದ್ವೇಷವೇ ಕಾರಣ ಎನ್ನಲಾಗುತ್ತಿದೆ.
ಸದ್ಯ ಆರೋಪಿಗಳ ಹೆಡೆಮುರಿ ಕಟ್ಟಲು ಸುಮಾರು 1,500 ಪೊಲೀಸರನ್ನು ವಿವಿಧ ತಂಡಗಳಾಗಿ ಮಾಡಿ ಕಲಬುರಗಿ, ವಿಜಯಪುರ, ಮಹಾರಾಷ್ಟ್ರದ ಸೋಲಾಪುರ, ಪುಣೆ, ಮುಂಬೈ ಸೇರಿದಂತೆ ವಿವಿಧ ಕಡೆ ಕಳುಹಿಸಿದ್ದಾರೆ. ಸಾಹುಕಾರ ಮೇಲೆ ದಾಳಿ ನಡೆದ ವೇಳೆ ಸಿಕ್ಕ ವಾಹನಗಳ ನಂಬರಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಹಾಡುಹಗಲೇ ನಡೆದ ಈ ಕೃತ್ಯ ಭೀಮಾತೀರದ ಅಪರಾಧ ಚಟುವಟಿಕೆಗಳು ಇನ್ನೂ ಜೀವಂತವಾಗಿದೆ ಎನ್ನುವುದನ್ನು ತೋರಿಸಿದೆ. ಮುಂಬೈ ಮೂಲದವರಿಂದ ಈ ಕೃತ್ಯಕ್ಕೆ ಸ್ಕೇಚ್ ಹಾಕಿರಬಹುದು ಎನ್ನುವುದು ಪೊಲೀಸರ ತನಿಖೆಯ ಪ್ರಾಥಮಿಕ ಮಾಹಿತಿಯಿಂದ ಲಭ್ಯವಾಗಿದೆ.
ಈ ಪ್ರಕರಣದಲ್ಲಿ ಕೆಲವರನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಜಿಲ್ಲಾ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಭೀಮಾತೀರದ ರಕ್ತಸಿಕ್ತ ಇತಿಹಾಸಕ್ಕೆ ಕೊನೆ ಹಾಡುವ ಕಾಲ ಸನ್ನಿತವಾಗಿದೆ ಎನ್ನುವ ವಿಶ್ವಾಸ ಹಿರಿಯ ಪೊಲೀಸ್ ಅಧಿಕಾರಿಗಳದ್ದಾಗಿದೆ.