ವಿಜಯಪುರ: ಬಸವ ಜನ್ಮಸ್ಥಳದಲ್ಲಿ ಬಸವನ ಬಾಗೇವಾಡಿಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇದರ ನಡುವೆ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು.
ಜಿಲ್ಲೆಯ ಬಸವನ ಬಾಗೇವಾಡಿ ನಗರದ ಬಸವಜನ್ಮ ಸ್ಮಾರಕದಲ್ಲಿ ಸಂಪ್ರದಾಯದಂತೆ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬಸವರಾಜ ಹಾರಿವಾಳ, ಶ್ವೇತಾ ಬಸವರಾಜ ಕಿಣಗಿ, ಸ್ಪಂದನಾ ರವೀಂದ್ರ ಕಿಣಗಿ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಬಾಲ ಬಸವೇಶ್ವರರ ಬೆಳ್ಳಿಯ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೊಟ್ಟಿಲು ತೂಗಿ ನಾಮಕಾರಣ ಮಾಡುವ ಮೂಲಕ ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿಸಿದರು.
ಭಕ್ತರು ಸ್ಮಾರಕದ ಹೊರಗೆ ನೈವೇದ್ಯ-ಕಾಯಿ-ಕರ್ಪೂರ ಸಲ್ಲಿಸಿ ನಮಸ್ಕರಿಸಿ ಹಿಂತಿರುಗುತ್ತಿರುವುದು ಸಾಮಾನ್ಯವಾಗಿತ್ತು. ಇದಕ್ಕೂ ಮುಂಚೆ ಪಟ್ಟಣದ ಮೂಲ ನಂದೀಶ್ವರ (ಬಸವೇಶ್ವರ) ದೇವಾಲಯ ಆವರಣದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿತು.
ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಬಸವೇಶ್ವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವಾನಂದ ಪಾಟೀಲ, ಪ್ರತಿ ವರ್ಷ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ಕೊರೊನಾ ಸೋಂಕಿನ 2ನೇ ಅಲೆಯ ನಿಯಂತ್ರಣದ ಹಿನ್ನೆಲೆ ಲಾಕ್‍ಡೌನ್ ಜಾರಿಯಾಗಿರುವ ಕಾರಣ ಕೇವಲ ನಾಲ್ಕು ಜನ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಜಯಂತಿಯನ್ನು ಆಚರಿಸಲಾಗಿದೆ ಎಂದರು.