ವಿಜಯಪುರ: ಗುಮ್ಮಟನಗರಿ ದ್ರಾಕ್ಷಿ ಮತ್ತು ನಿಂಬೆ ಬೆಳೆಗೆ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ, ಇದೀಗ ರೇಷ್ಮೆ ನೂಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದೆ. ನಾಲ್ವರು ಸ್ನೇಹಿತರು ಸೇರಿಕೊಂಡು ವಿಜಯಪುರ ತಾಲೂಕಿನ ಕುಮಟಗಿ ಗ್ರಾಮದಲ್ಲಿ ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕ ಆರಂಭಿಸಿದ್ದು, ಇದರಿಂದಾಗಿ ವಿಜಯಪುರ, ಕಲಬುರ್ಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ರೇಷ್ಮೆ ಬೆಳೆಯುವ ರೈತರಿಗೆ ಅನುಕೂಲವಾಗಿದೆ.
ನಾಲ್ವರು ಸ್ನೇಹಿತರು ಸೇರಿ ಘಟಕ ಸ್ಥಾಪನೆ, 35 ಜನರಿಗೆ ಕೆಲಸ: ಈ ಘಟಕದಲ್ಲಿ ನಿತ್ಯ 700 ಕೆಜಿಗೂ ಅಧಿಕ ರೇಷ್ಮೆಯನ್ನೂ ನೂಲು ಮಾಡಿ ಮಾರಾಟ ಮಾಡಲಾಗುತ್ತಿದೆ. ಉದ್ಯಮಿಗಳಾದ ಪಿ.ಕೆ ಚಿಂಚಲಿ, ಸಿದ್ದಯ್ಯ ಮಠ, ಮಲ್ಲಿಕಾರ್ಜುನ ಬಿಜ್ಜರಗಿ ಹಾಗೂ ಸುರೇಶ ಪರಗೊಂಡ ಎಂಬವರು ಸೇರಿ ರೇಷ್ಮೆ ಇಲಾಖೆಯ ಸಬ್ಸಿಡಿ ಸದುಪಯೋಗ ಪಡಿಸಿಕೊಂಡು ನಾಲ್ಕು ಎಕರೆಯಲ್ಲಿ ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕವನ್ನು ಆರಂಭಿಸಿದ್ದಾರೆ. ಅಲ್ಲದೇ ಇಲ್ಲಿನ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.
ಹಿಂದೆ ಜಿಲ್ಲೆ ಸೇರಿದಂತೆ ಪರರಾಜ್ಯದಲ್ಲಿ ಬೆಳೆಯುವ ರೇಷ್ಮೆಯನ್ನು ದಲ್ಲಾಳಿಗಳ ಮೂಲಕ ರಾಮನಗರಕ್ಕೆ ಕಳುಹಿಸಲಾಗುತ್ತಿತ್ತು. ದಲ್ಲಾಳಿ ಹಾಗೂ ಸಾಗಾತ ವೆಚ್ಚದಿಂದ ಲಾಭ ಕಡಿಮೆಯಾಗುತ್ತಿತ್ತು. ಇದರಿಂದಾಗಿ ರೈತರು ರೇಷ್ಮೆ ಕೃಷಿ ಕೈ ಬಿಟ್ಟಿದ್ದರು. ಈಗ ಈ ಘಟಕ ಆರಂಭಗೊಂಡ ಮೇಲೆ ಮತ್ತೆ ಈ ಭಾಗದಲ್ಲಿ ರೇಷ್ಮೆ ಬೆಳೆಯಲು ರೈತರು ಮುಂದಾಗಿದ್ದಾರೆ.
700 ಕೆ.ಜಿಗಿಂತ ಹೆಚ್ಚು ರೇಷ್ಮೆಗಳಿಂದ ದಾರ ಉತ್ಪತ್ತಿ: ಇನ್ನು ರಾಮನಗರದಲ್ಲಿನ ಬೆಲೆಯಂತೆ ಪ್ರತಿ ಕೆಜಿ ರೇಷ್ಮೆಗೆ 700 ರೂವನ್ನು ರೈತರಿಗೆ ನೀಡಲಾತ್ತಿದ್ದು, ಇದರಿಂದ ರೈತರು ಸಂತೋಷಗೊಂಡಿದ್ದಾರೆ. ನಿತ್ಯ 700-750 ಕೆಜಿ ರೇಷ್ಮೆ ಘಟಕಕ್ಕೆ ಬರುತ್ತಿದೆ. ಸದ್ಯ ರೇಷ್ಮೆ ಘಟನಕದಿಂದಾಗಿ ರೈತರಿಗೆ ಮೂರು ಪಟ್ಟು ಲಾಭ ಹೆಚ್ಚಾಗಿದ್ದು, ಇದು ಸಹಜವಾಗಿ ರೇಷ್ಮೆ ಬೆಳೆಗಾರರಲ್ಲಿ ಮಂದಹಾಸವನ್ನು ಮೂಡಿದೆ.