ಮುದ್ದೇಬಿಹಾಳ : ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿಯೊಬ್ಬರು ಮಾಜಿ ಸಿಎಂ ಸಿದ್ಧರಾಮಯ್ಯ ಗುಣಗಾನ ಮಾಡಿದ ಪ್ರಸಂಗ ನಡೆಯಿತು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾರುತಿ ನಗರದ ಯಲ್ಲಾಲಿಂಗೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂಬುವುದನ್ನು ಸಿಎಂ ಆಗುವ ಮೂಲಕ ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ, ಇಂದಿಗೂ ದಿಟ್ಟ ರಾಜಕಾರಣಿಯಾಗಿರುವ ಕುರುಬ ಹೋರಾಟಗಾರನಿದ್ದರೆ, ಅದು ಸಿದ್ದರಾಮಯ್ಯ ಮಾತ್ರ ಎಂದು ಕೊಂಡಾಡಿದರು.
ಸಿದ್ದರಾಮಯ್ಯರ ಗುಣಗಾನ ಮಾಡಿದ ಸಿದ್ಧಲಿಂಗ ಸ್ವಾಮೀಜಿ ಓದಿ : ಮುದ್ದೇಬಿಹಾಳ: ಕಲ್ಪವೃಕ್ಷಕ್ಕೆ ಸೀಮಂತ ಕಾರ್ಯ ಮಾಡಿದ ಅಧಿಕಾರಿಗಳು
ಅಲ್ಲದೇ ಕ್ಷೇತ್ರದಲ್ಲಿ ಕುರುಬರು ಒಗ್ಗಟ್ಟಾದರೆ ಶಾಸಕರಾಗಬಹುದು. ಸಾಧನೆ ಮಾಡುವ ಶಕ್ತಿ ಕುರುಬ ಸಮಾಜಕ್ಕಿದೆ, ಕೈ ಮುಗಿದು ಕೇಳುತ್ತೇನೆ ಸಂಘಟಿತರಾಗಿ. ಮನಸ್ಸು ಮಾಡಿದರೆ ಮುದ್ದೇಬಿಹಾಳದಲ್ಲಿ ಕುರುಬರೇ ಶಾಸಕರಾಗಿ ಮೆರೆಯಬಹುದು ಎಂದು ಹೇಳಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ರಾಜಕೀಯ ಭಾಷಣ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಕುರುಬರ ಸಂಘದ ಅಧ್ಯಕ್ಷ ಎಂ.ಎನ್ ಮದರಿ, ಪುರಸಭೆ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.