ವಿಜಯಪುರ : ಸಂಕ್ರಮಣದ ಸಂದರ್ಭದಲ್ಲಿ ಜರುಗುವ ಉತ್ತರ ಕರ್ನಾಟಕದ ಪ್ರಸಿದ್ಧ ಶ್ರೀ ಸಿದ್ದೇಶ್ವರ ಜಾತ್ರೆ ಈ ವರ್ಷವೂ ಸಹ ವಿಜೃಂಭಣೆಯಿಂದ ಸಂಪ್ರದಾಯದಂತೆ ನಡೆಯುತ್ತಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಾರವಿಡೀ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶುಕ್ರವಾರದಂದು ಸಿದ್ದೇಶ್ವರ ಜಾತ್ರೆಗೆ ಚಾಲನೆ ದೊರಕಿದ್ದು, ದೇವಸ್ಥಾನವು ವಿದ್ಯುದ್ದೀಪ ಹಾಗೂ ಹೂಮಾಲೆಗಳಿಂದ ಅಲಂಕೃತಗೊಂಡಿದೆ. ದೇವರಿಗೆ ದಿನನಿತ್ಯ ವಿಶೇಷ ಪೂಜೆ ನೆರವೇರಿಸಲಾಗುತ್ತಿದ್ದು, ನಿನ್ನೆ ಶನಿವಾರದಂದು ನಂದಿ ಧ್ವಜಗಳ ಉತ್ಸವ ನಡೆಯಿತು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶೇಷ ಪೂಜೆ ಸಲ್ಲಿಸಿ, ನಂದಿ ಧ್ವಜಗಳ ಮೆರವಣಿಗೆಗೆ ಚಾಲನೆ ನೀಡಿದ್ದರು.
ಸಿದ್ದೇಶ್ವರ ದೇವಸ್ಥಾನದಿಂದ ಬಜಾರ್ನ ಪ್ರಮುಖ ರಸ್ತೆಗಳಲ್ಲಿ, ಲಿಂಗದಗುಡಿಯವರೆಗೆ ನಂದಿ ಧ್ವಜಗಳ ಉತ್ಸವ ನಡೆಯಿತು. ಲಿಂಗದಗುಡಿಯಲ್ಲಿರುವ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ಕಾರ್ಯಕ್ರಮವೂ ನಿನ್ನೆ ನಡೆಯಿತು. ಸಂಜೆ ದೇವಸ್ಥಾನದ ಆವರಣದಲ್ಲಿ ಭಜನೆ ಮತ್ತು ಮನರಂಜನೆ ಕಾರ್ಯಕ್ರಮಗಳು ನಡೆದವು. ಭಾನುವಾರ ಶ್ರೀ ಸಿದ್ದರಾಮನ ಯೋಗದಂಡಕ್ಕೆ ಅಕ್ಷತಾರ್ಪಣೆ ಹಾಗೂ ಭೋಗಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ದಂಪತಿ, ಇನ್ನಿತರರು ಪಾಲ್ಗೊಂಡಿದ್ದರು. ಬಳಿಕ ನಂದಿ ಧ್ವಜಗಳ ಉತ್ಸವದ ಜೊತೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸೋಮವಾರ ಸಂಕ್ರಮಣ ಆಚರಣೆ, ಮೆರವಣಿಗೆ, ಹೋಮ-ಹವನ ಕಾರ್ಯಕ್ರಮ ಮತ್ತು ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ ನಡೆಯಲಿದೆ.