ವಿಜಯಪುರ:ಸಿದ್ದೇಶ್ವರ ಸ್ವಾಮೀಜಿಯ ಚಿತಾಭಸ್ಮವನ್ನು ಭಕ್ತರಿಗೆ ನೀಡಲಾಗುವುದಿಲ್ಲ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ನಡೆದಾಡುವ ದೇವರು ಶ್ರೀ ಸಿದ್ದೇಶ್ವರರ ಚಿತಾಭಸ್ಮವನ್ನು ಭಕ್ತರಿಗೆ ನೀಡಲಾಗುತ್ತಿದೆ ಎಂದು ನಿನ್ನೆ ರಾತ್ರಿ ನಡೆದ ಅಂತ್ಯಕ್ರಿಯೆಯ ವೇಳೆ ಕನ್ಹೇರಿ ಮಠದ ಸ್ವಾಮೀಜಿ ಹೇಳಿದ್ದರು. ಅಲ್ಲದೇ ಚಿತಾಭಸ್ಮವನ್ನು ಯಾರೂ ನದಿ ಹಾಗೂ ಸಾಗರದಲ್ಲಿ ವಿಸರ್ಜನೆ ಮಾಡಲು ಇಚ್ಛೆಪಡುತ್ತಾರೋ ಅವರು ಹೆಸರು ನೋಂದಾಯಿಸುವಂತೆಯೂ ಕೂಡಾ ಹೇಳಿದ್ದರು. ಆದರೆ, ಯಾವುದೇ ಭಕ್ತರಿಗೆ ಶ್ರೀಗಳ ಚಿತಾಭಸ್ಮವನ್ನು ನೀಡುವುದಿಲ್ಲ ಎಂದು ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿಗಳ ಆಣತಿಯಂತೆ ನಾವು ಯಾವುದೇ ಚಿತಾಭಸ್ಮವನ್ನು ನೀಡಲ್ಲ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿ ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು. ಚಿತಾಭಸ್ಮವನ್ನು ನದಿ ಮತ್ತು ಸಮುದ್ರದಲ್ಲಿ ವಿಸರ್ಜನೆ ಮಾಡಬೇಕೆಂಬುದರ ಕುರಿತು ಆಶ್ರಮದಲ್ಲಿರುವ ಸ್ವಾಮೀಜಿಗಳು ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಈ ಕುರಿತು ಕನ್ಹೇರಿ ಮಠದ ಶ್ರೀಗಳು ಹಾಗೂ ಸುತ್ತೂರು ಮಠದ ಶ್ರೀಗಳು ಸೇರಿದಂತೆ ಇತರ ಸ್ವಾಮೀಜಿಗಳ ಸಲಹೆಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ.
ಸದ್ಯದಲ್ಲೇ ಒಂದು ಸಭೆ ನಡೆಸಲಾಗುವುದು. ಆ ಬಳಿಕ ಚಿತಾಭಸ್ಮ ವಿಸರ್ಜನೆಯ ಕುರಿತು ನಿರ್ಧಾರ ಮಾಡುತ್ತೇವೆ. ಮೂರು ದಿನಗಳ ನಂತರ ಅಂದರೆ ನಾಳೆ (ಗುರುವಾರ) ಸರಳ ವಿಧಿ ವಿಧಾನಗಳ ಆಚರಣೆಯ ಮೂಲಕ ಚಿತಾಭಸ್ಮ ವಿಸರ್ಜನೆಗೆ ಮುಂದಾಗುತ್ತೇವೆ ಎಂದು ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.