ವಿಜಯಪುರ :ನಡೆದಾಡುವ ದೇವರು, ಶತಮಾನದ ಸಂತ, ಖ್ಯಾತ ಪ್ರವಚನಕಾರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಗುರುನಮನ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇತರ ಮಠಾಧೀಶರು, ಸಚಿವರು, ಶಾಸಕರು ಮತ್ತು ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಲಿಂಗೈಕ್ಯರಾಗಿ ಇಂದಿಗೆ ಒಂದು ವರ್ಷ ಸಂದಿದೆ. ಈ ಸಂಬಂಧ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಇಂದು ಪುಷ್ಪನಮನ ಕಾರ್ಯಕ್ರಮ ನಡೆಯಿತು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಶ್ರೀಗಳಿಗೆ ಪುಷ್ಪನಮನ ಸಲ್ಲಿಸಿದರು. ಇದಕ್ಕೂ ಮುನ್ನ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ನಡೆಯಿತು.
ಬಳಿಕ ಗುರುನಮನ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ಸಿದ್ದೇಶ್ವರ ಶ್ರೀಗಳ ಪ್ರವಚನದ ಕುರಿತ 20 ಗ್ರಂಥಗಳನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ನಾನು ಇಂದು ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಬಂದಿದ್ದೇನೆ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ ಪ್ರೀತಿ, ಗೌರವ ಇದೆ. ಅವರ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೆ. ನಾನು ಹಿಂದೊಮ್ಮೆ ಶರಣ ಸಾಹಿತ್ಯ ಸಮ್ಮೇಳನಕ್ಕೆ ವಿಜಯಪುರಕ್ಕೆ ಬಂದಿದ್ದೆ ಎಂದರು.
ನಾನು ಬಸವಾದಿ ಶರಣರ ಅನುಯಾಯಿ. ಬಸವಾದಿ ಶರಣರು ನಮ್ಮ ಸಮಾಜದ ಅಂಕುಡೊಂಕುಗಳನ್ನು ತೊಲಗಿಸಿ, ಜಾತಿ ರಹಿತವಾದ ಸಮಾಜದ ಕನಸು ಕಂಡವರು. ಈ ಸಿದ್ದೇಶ್ವರ ಸ್ವಾಮಿಗಳು ಅದೇ ಸಾಲಿನಲ್ಲಿದ್ದರು. ಶ್ರೀಗಳು ಮನುಷ್ಯ ಹೇಗಿರಬೇಕು, ಹೇಗೆ ಬಾಳಬೇಕು ಎಂಬುದನ್ನು ಪ್ರವಚನದ ಮೂಲಕ ಸಾರಿದ್ದಾರೆ. ಸಿದ್ದೇಶ್ವರ ಶ್ರೀಗಳು ಜ್ಞಾನವನ್ನು ಸಂಪಾದನೆ ಮಾಡಿದರು. ಅದುವೇ ಮನುಷ್ಯತ್ವದ ಜ್ಞಾನ. ನಾವೆಲ್ಲರೂ ಮನುಷ್ಯರಾಗಿ ಬದುಕಬೇಕು ಎಂಬುದು ಶ್ರೀಗಳ ಉದ್ದೇಶವಾಗಿತ್ತು. ತಾಯಿ ಮಕ್ಕಳನ್ನು ಪ್ರೀತಿಸುವಂತೆ ಎಲ್ಲರನ್ನೂ ಪ್ರೀತಿಸಬೇಕೆಂಬುದು ಶ್ರೀಗಳ ತತ್ವವಾಗಿತ್ತು. ಶ್ರೀಗಳ ಬದುಕು ನಮಗೆಲ್ಲ ಆದರ್ಶವಾಗಿದೆ. ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀಗಳ ಅಗಲಿಕೆಗೂ ಮುನ್ನ ನಾನು ಇಲ್ಲಿಗೆ ಬಂದಿದ್ದೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಎಚ್ ಕೆ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ಲಕ್ಷಾಂತರ ಭಕ್ತರು ಆಶ್ರಮಕ್ಕೆ ಆಗಮಿಸಿ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ವೇದಿಕೆಗೆ ಆಗಮಿಸುವ ಮುನ್ನವೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೆರಳಿದರು.