ವಿಜಯಪುರ: ನಡೆದಾಡುವ ದೇವರು ಜ್ಞಾನಯೋಗಾಶ್ರಮದ ಇತ್ತೀಚಿಗೆ ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿಗಳನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಾಣ ಮಾಡಿದ್ದ ಕಟ್ಟೆ ಇಂದು ತೆರವುಗೊಳಿಸಲಾಗಿದೆ. ಯಾವುದೇ ಮಠ, ಮಂದಿರ ತಮ್ಮ ಹೆಸರಲ್ಲಿ ನಿರ್ಮಾಣ ಮಾಡಬಾರದು ಎಂದು ಶ್ರೀಗಳು 2014ರಲ್ಲಿ ಉಯಿಲು ಬರೆದಿದ್ದರು.
ಅದರಂತೆ ಜನವರಿ 2ರಂದು ಲಿಂಗೈಕ್ಯರಾದ ಶ್ರೀಗಳ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗಿತ್ತು. ನಂತರ 7 ದಿನದ ಕಾರ್ಯದಲ್ಲಿ ಅವರ ಚಿತಾಭಸ್ಮವನ್ನು ಭಾನುವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳ ತ್ರಿವೇಣಿ ಸಂಗಮ ಸ್ಥಳವಾದ ಕೂಡಮ ಸಂಗಮ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿಸಲಾಗಿತ್ತು.
ಶ್ರೀಗಳ ಆಶಯದಂತೆ ಅವರನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಿಸಿದ್ದ ಕಟ್ಟೆಯೂ ತೆರವುಗೊಳಿಸಲಾಗಿದೆ. ನಿನ್ನೆ ತಡರಾತ್ರಿ ಗೋಕರ್ಣದಿಂದ ಬಂದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಕಟ್ಟೆಯನ್ನು ತೆರವು ಮಾಡಲಾಗಿದೆ. ನಂತರ ಆಶ್ರಮದ ಸಿಬ್ಬಂದಿ ಅಂತ್ಯ ಸಂಸ್ಕಾರ ಮಾಡಿದ ಸ್ಥಳವನ್ನು ನೀರಿನಿಂದ ಶುಚಿಗೊಳಿಸುತ್ತಿದ್ದಾರೆ. ಇದರ ನಡುವೆಯೂ ಆಶ್ರಮಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಆಶ್ರಮ ಭೇಟಿ ನೀಡಿದವರು ಶ್ರೀಗಳನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳ ದರ್ಶನ ಮಾಡಿ, ಕೆಲ ಹೊತ್ತು ಶ್ರೀಗಳ ನೆನಪಿನಲ್ಲಿ ಧ್ಯಾನ ಮಾಡುತ್ತಿದ್ದಾರೆ.
ಶ್ರೀಗಳು ಬರೆದ ಪತ್ರದಲ್ಲೇನಿತ್ತು:ನುಡಿದಮತೆ ನಡೆದು, ನಡೆದಂತೆ ನುಡಿದ ನಿಜಸಂತ 2014ರ ಗುರು ಪೂರ್ಣಿಮೆಯಂದು ತಮ್ಮ ಅಂತಿಮ ಅಭಿವಂದನ ಪತ್ರವನ್ನು ಬರೆದಿದ್ದರು. ಆ ಪತ್ರಕ್ಕೆ ನ್ಯಾಯಾಧೀಶರು ಸಹಿ ಹಾಕಿದ್ದರು. ಜನವರಿ ಎರಡರಂದು ಸಿದ್ದೇಶ್ವರ ಶ್ರೀಗಳು ಇಹ ಲೋಕ ತ್ಯಜಿಸಿದ್ದರು. ಅಂದು ವೈಕುಂಠ ಏಕಾದಶಿ ದಿನವಾಗಿದ್ದು, ಸ್ವರ್ಗದ ಎಲ್ಲ ಬಾಗಿಲುಗಳು ತೆರೆದಿರುತ್ತವೆ ಎಂದು ಹಿಂದೂ ಪೌರಾಣಿಕ ನಂಬಿಕೆ ಜನರಲ್ಲಿ ಮನೆ ಮಾಡಿದೆ.