ವಿಜಯಪುರ : "ನಮ್ಮ ಮೇಲೆ ನಿಮಗೆ ವಿಶ್ವಾಸವಿದೆಯಾ?, ಹಾಗಾದರೆ ಬಿಜೆಪಿಗೆ ನೀವು ಮತ ಹಾಕಿ. ನಿಮ್ಮವರಿಗೂ ಮತ ಹಾಕಲು ಹೇಳಿ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅರೆಕ್ಷಣ ಅಲ್ಲಿದ್ದ ಜನರು ಕಕ್ಕಾಬಿಕ್ಕಿಯಾಗಿದ್ದರು. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆಯಿತು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, "ನಾನು ಅಧಿಕಾರದಲ್ಲಿದ್ದಾಗ ಬಡವರಿಗೆ 7 ಕೆಜಿ ಅಕ್ಕಿ ನೀಡಿದ್ದೇನೆ. ಅದನ್ನು ಬಿಜೆಪಿಯ ಯಡಿಯೂರಪ್ಪ ಸರ್ಕಾರ 5 ಕೆಜಿಗೆ ಇಳಿಸಿತ್ತು. ಉಚಿತವಾಗಿ ನೀಡುವ ಅಕ್ಕಿಯನ್ನು ಕಡಿಮೆ ಮಾಡಬೇಡಿ. ಇದು ಬಡವರಿಗೆ ನೀಡುವ ಕಾರ್ಯಕ್ರಮ, ನಾವು ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎಂದು ನಾನು ಯಡಿಯೂರಪ್ಪನವರಿಗೆ ಹೇಳಿದ್ದೆ. ಅದಕ್ಕವರು ನಾವೇನು ಮಾಡೋದು?, ನಮ್ಮ ಹತ್ತಿರ ದುಡ್ಡಿಲ್ಲ. ಆ ರೀತಿ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದರು. ನಾನು ಕೊಡುವುದಾದರೆ ನೀವೇಕೆ ಕೊಡಲು ಸಾಧ್ಯವಿಲ್ಲ. ಸ್ವಲ್ಪ ಲೂಟಿ ಮಾಡೋದನ್ನು ಕಡಿಮೆ ಮಾಡಿ ಎಂದಿದ್ದೆ" ಎಂದರು.
ಇದೇ ವೇಳೆ, ಮಾತಿನ ಭರದಲ್ಲಿ ಸಿದ್ದರಾಮಯ್ಯ, "ಜನರೇ ನಿಮಗೆ ನಮ್ಮ ಮೇಲೆ ವಿಶ್ವಾಸವಿದೆಯಾ? ನಮ್ಮ ಸರ್ಕಾರ ತನ್ನಿ. 7 ಕೆಜಿ ಅಕ್ಕಿಯ ಬದಲು 10 ಕೆಜಿ ಉಚಿತವಾಗಿ ನೀಡುತ್ತೇನೆ. ಹಾಗಾಗಿ ನಮ್ಮ ಮೇಲೆ ವಿಶ್ವಾಸವಿಟ್ಟು ಬಿಜೆಪಿಗೆ ನೀವು ಮತ ನೀಡಿ, ನಿಮ್ಮವರಿಗೂ ಮತ ನೀಡಲು ಹೇಳಿ" ಎಂದರು. ನಂತರ ಸಾವರಿಸಿಕೊಂಡ ಅವರು, ಇಲ್ಲ ಕಾಂಗ್ರೆಸ್ಗೆ ಮತ ಹಾಕಿ ಎಂದು ತಪ್ಪು ಸರಿಪಡಿಸಿಕೊಂಡರು.