ವಿಜಯಪುರ:ಸಿಂದಗಿ ಉಪಚುನಾಣೆಗೋಸ್ಕರ ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಮತಯಾಚನೆ ಮಾಡ್ತಿದ್ದು, ಈ ವೇಳೆ ಮಾತನಾಡಿರುವ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಮಿಸ್ಟರ್, ಬಸವರಾಜ ಬೊಮ್ಮಾಯಿ ಒಂದು ಕೆಲಸ ಮಾಡಿಲ್ಲ. ಕೆಲಸ ಮಾಡಿದ್ದರೆ ತಾನೇ ಹೇಳಬೇಕು. ಒಂದೇ ವೇದಿಕೆಯ ಮೇಲೆ ಬನ್ನಿ ಸಣ್ಣ ಚರ್ಚೆ ಮಾಡೋಣ. ಮಾಡಿರುವ ಕೆಲಸ ಹೇಳಬೇಕು ಎಂದರೆ ಧಮ್ ಬೇಕಲ್ಲ. ಬಸವರಾಜ ಬೊಮ್ಮಾಯಿ ಸುಳ್ಳು ಹೇಳೋದು, ಹೀಗಾಗಿ ಚರ್ಚೆಗೆ ಬರುತ್ತಿಲ್ಲ. ನಿಮಗೆ ಧಮ್ ಇದ್ರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಸಿಂದಗಿ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆ ನಾವು ಯಾರೂ ಬಯಸಿರಲಿಲ್ಲ. ಎಂ ಸಿ ಮನಗೂಳಿ ಅವರ ನಿಧನದಿಂದ ಈ ಚುನಾವಣೆ ನಡೆಯುತ್ತಿದೆ. ಮನಗೂಳಿ ಅವರು ನನಗೆ ಬಹಳ ಆತ್ಮೀಯರು. ನನ್ನೊಂದಿಗೆ ಅವರು ಬಹಳ ಹತ್ತಿರದ ಒಡನಾಟ ಇಟ್ಕೊಂಡಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹಳೆಯ ಗೆಳತನವನ್ನು ನೆನಪಿಸಿಕೊಂಡರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ:ಶರಣಪ್ಪ ಸುಣಗಾರ ಅವರು ಈ ಭಾಗದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ.ಅವರ ಮನವೊಲಿಸಿ ನಾವು ಅಶೋಕ್ ಮನಗೂಳಿ ಅವರಿಗೆ ಟಿಕೆಟ್ ನೀಡಿದ್ದೇವೆ. ಸೂರ್ಯ ಪೂರ್ವದಲ್ಲಿ ಹುಟ್ಟುವದು ಎಷ್ಟು ಸತ್ಯವೋ, ಅಶೋಕ್ ಮನಗೂಳಿ ಗೆಲುವು ಕೂಡ ಅಷ್ಟೇ ಸತ್ಯ ಎಂದರು. ಬಿಜೆಪಿ ಅಧಿಕಾರದಲ್ಲಿ ಕಾಂಗ್ರೆಸ್ ಯೋಜನೆಗಳನ್ನು ಮೊಟುಕುಗೊಳಿಸುತ್ತಿದೆ ಎಂದು ಆರೋಪ ಮಾಡಿದ ಸಿದ್ದು, 7 ಕೆಜಿಯಿಂದ 5 ಕೆಜಿ ಅಕ್ಕಿ ಇಳಿಸಿದ್ದಾರೆ. ಈ ಕುರಿತು ನಾನು ಮಿಸ್ಟರ್ ಯಡಿಯೂರಪ್ಪಗೆ ಹೇಳಿದೆ. ಆಗ ಯಡಿಯೂರಪ್ಪ ದುಡ್ಡಿಲ್ಲ ಎಂದಿದ್ದರು. ಈ ವೇಳೆ ಕುರ್ಚಿ ಬಿಟ್ಟು ಇಳಿಯುವಂತೆ ವಾರ್ನ್ ಮಾಡಿದ್ದೇನು ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಸಮಸ್ಯೆ ಆಗುತ್ತಿದೆ. 10 ಕೆಜಿ ಅಕ್ಕಿ , 10 ಸಾವಿರ ಕೊಡಿ ಎಂದು ತಿಳಿಸಿದ್ರೂ, ಯಡಿಯೂರಪ್ಪ ಜಪ್ಪಯ್ಯ ಅನಲಿಲ್ಲ. ಒಂದು ವೇಳೆ ನಮ್ಮ ಸರ್ಕಾರ ಇದ್ದರೆ, 10 ಕೆಜಿ ಅಕ್ಕಿ ಜೊತೆಗೆ 10 ಸಾವಿರ ಕೊಡುತ್ತಿದ್ದೆ ಎಂದರು.
ಈ ಬಾರಿ ಅಶೋಕ್ ಮನಗೂಳಿ ಗೆಲ್ಲಿಸಿ, ಮುಂದಿನ ಚುನಾವಣೆಯಲ್ಲಿ ನಾವೇ ಗೆದ್ದು ಬರುತ್ತೇವೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಸಚಿವ ಉಮೇಶ್ ಕತ್ತಿ ಹೇಳುತ್ತಾರೆ 5 ಕೆಜಿ ಸಾಕು ಎಂದು. ಮಿಸ್ಟರ್ ಉಮೇಶ ಕತ್ತಿ, ನಿನಗೆ ಶುಗರ್ ಬಂದಿದೆ. ನೀನು ಅಕ್ಕಿ ತಿನ್ನಲ್ಲ, ಬಡವರಿಗೆ ಉಪಯೋಗವಾಗುತ್ತೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದು ಬುದ್ಧಿವಾದ ಹೇಳಿದರು.