ವಿಜಯಪುರ:ಶ್ರೀ ಸಿದ್ಧೇಶ್ವರ ಸ್ವಾಮೀಜಿ ಲಿಂಗ್ಯಕ್ಕರಾದ ಹಿನ್ನೆಲೆ ಜ್ಞಾನ ಯೋಗಾಶ್ರಮಕ್ಕೆ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೇಟಿ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಕಟ್ಟೆ( ಅಂತ್ಯಕ್ರಿಯೆ ಮಾಡಿದ ಸ್ಥಳದ) ದರ್ಶನ ಪಡೆದರು.
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ ಸಂದರ್ಭದಲ್ಲಿ ಕಾರಣಾಂತರದಿಂದ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶುಕ್ರವಾರ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ ಸಿದ್ಧಲಿಂಗ ಶ್ರೀಗಳು, ಸಿದ್ದೇಶ್ವರ ಶ್ರೀಗಳ ಚಿತಾಕಟ್ಟೆ ದರ್ಶನ ಮಾಡಿದರು. ಅಧ್ಯಾತ್ಮ ಲೋಕದಲ್ಲಿ ಸಿದ್ದೇಶ್ವರ ಶ್ರೀಗಳು ಭಾಸ್ಕರನಿದ್ದಂತೆ. ಆಧ್ಯಾತ್ಮ ಪ್ರವಚನದ ಮೂಲಕ ಮನಕುಲಕ್ಕೆ ಮಾದರಿಯಾಗಿದ್ದರು ಎಂದು ಗುಣಗಾನ ಮಾಡಿದರು.
ವಿಷಾದ ವ್ಯಕ್ತಪಡಿಸಿದ ಸ್ವಾಮೀಜಿ:ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಸಿದ್ಧಲಿಂಗ ಶ್ರೀಗಳು, ಅನಿವಾರ್ಯ ಕಾರ್ಯಗಳಿಂದ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗಿರಲಿಲ್ಲ. ಹೀಗಾಗಿ ಇಂದು ಆಗಮಿಸಿ ಚಿತಾಕಟ್ಟೆ ದರ್ಶನ ಪಡೆದಿದ್ದೇವೆ. ಸಾಧ್ಯವಾದರೆ ಚಿತಾಭಸ್ಮ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದರು. ಅಲ್ಲದೇ ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳು ಸಿದ್ದೇಶ್ವರ ಶ್ರೀಗಳ ಒಡನಾಟವನ್ನು ಸ್ಮರಿಸಿದರು.
ಜ್ಞಾನ ಯೋಗಾಶ್ರಮಕ್ಕೆ ಭಕ್ತರ ದಂಡು:ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯರಾಗಿ ಮೂರು ದಿನ ಕಳೆದರೂ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಇದೆ. ಶ್ರೀಗಳ ಅಗ್ನಿ ಸ್ಪರ್ಶ ಸ್ಥಳವನ್ನು ನೋಡಿ ಭಕ್ತಿ ಪರವಶರಾಗುತ್ತಿದ್ದಾರೆ. ಬರುವ ಭಕ್ತರು ವಿಭೂತಿ ತಂದು ಅದಕ್ಕೆ ಪೂಜೆ ನೇರವೇರಿಸಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
ನಿಲ್ಲದ ಅನ್ನ ದಾಸೋಹ: ಆಶ್ರಮಕ್ಕೆ ಆಗಮಿಸುವ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ಸ್ವೀಕರಿಸಿ ಭಕ್ತರು ಕೃತಾರ್ಥರಾಗುತ್ತಿದ್ದಾರೆ. ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ: ಜ್ಞಾನಯೋಗಿ, ನಡೆದಾಡುವ ದೇವರೆಂದೇ ಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು (81) ಜ.2ರಂದು ಇಹಲೋಕ ತ್ಯಜಿಸಿದ್ದಾರೆ. ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದ್ದ ಸಿದ್ದೇಶ್ವರ ಮಹಾಸ್ವಾಮೀಜಿಗಳು ಎರಡನೇ ವಿವೇಕಾನಂದ ಎನಿಸಿಕೊಂಡಿದ್ದರು.