ಸಂತ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ನುಡಿನಮನಕ್ಕೆ ಸಿದ್ಧತೆ ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯವಾಗಿ ಜನವರಿ 2ಕ್ಕೆ ವರ್ಷ ಆಗಲಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದ ಡಿ. 31ರವರೆಗೆ ಜ್ಞಾನ ಯೋಗಾಶ್ರಮದಲ್ಲಿ ವಿವಿಧ ವಿಷಯಗಳ ಕುರಿತಾಗಿ ವಿಚಾರಗೋಷ್ಠಿಗಳು ನಡೆಯಲಿವೆ. ಈ ಹಿನ್ನೆಲೆ ಭಕ್ತರು ಜ್ಞಾನಯೋಗಾಶ್ರಮದಲ್ಲಿ ವಿಚಾರ ಗೋಷ್ಠಿ ವೇದಿಕೆ ನಿರ್ಮಾಣ, ಬರುವ ಭಕ್ತಾದಿಗಳಿಗೆ ಪ್ರವಾಸದ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಡಿ. 27 ರಂದು ಸಿದ್ದೇಶ್ವರ ದೇಗುಲದಿಂದ ಜ್ಞಾನ ಯೋಗಾಶ್ರಮದವರೆಗೆ ನೂರಾರು ಮಹಿಳೆಯರು ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನದ ಪುಸ್ತಕಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆ ನಡೆಸಲಿದ್ದಾರೆ. ಜನವರಿ 1 ಹಾಗು 2 ರಂದು ವಿಜಯಪುರ ಬಿಎಲ್ಡಿಇ ಹೊಸ ಕ್ಯಾಂಪಸ್ನಲ್ಲಿ ಗುರುನಮನ ಕಾರ್ಯಕ್ರಮ ನಡೆಯಲಿದ್ದು, ಕೋವಿಡ್ ಮುನ್ನೆಚ್ಚರಿಕಾ ಕ್ರಮದೊಂದಿಗೆ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಇಂದಿನಿಂದ 9 ದಿನಗಳ ಕಾಲ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನದ ವಿಷಯಗಳಾದ ಪ್ರಕೃತಿ, ಜಾನಪದ, ಗ್ರಾಮೀಣ ಸೊಗಡು ಹೀಗೆ 9 ವಿಷಯಗಳ ಕುರಿತು ವಿಚಾರಗೋಷ್ಠಿ ನಡೆಯಲಿವೆ. ಗುರುನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ್ಞಾನ ಯೋಗಾಶ್ರಮದಲ್ಲಿರುವ ಗ್ರಂಥಾಲಯ ಉದ್ಘಾಟನೆ ಹಾಗೂ ಸಿದ್ದೇಶ್ವರ ಸ್ವಾಮೀಜಿಯ ಪ್ರವಚನದ ಹಿಂದಿ ಭಾಷಾಂತರದ ಪುಸ್ತಕ ಬಿಡುಗಡೆ ನಡೆಯಲಿದೆ. ಡಿ.31 ರಂದು ಯೋಗದ ಮೂಲಕ ಸಿದ್ದೇಶ್ವರ ಸ್ವಾಮೀಜಿಗೆ ನಮನ ಸಲ್ಲಿಸಲು ನಿರ್ಧರಿಸಿದ್ದು, ಬಾಬಾ ರಾಮದೇವ್ ಅವರನ್ನು ಆಹ್ವಾನಿಸಲಾಗಿದೆ. ಜ. 2 ರಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ನಾಡಿನ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎಂದು ಹರ್ಷಾನಂದ ಸ್ವಾಮೀಜಿ ತಿಳಿಸಿದರು.
ನಡೆದಾಡುವ ಸಂತ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಪ್ರವಚನ, ಸರಳತೆ. ನಡೆ ಎಲ್ಲವೂ ಈಗಲೂ ಭಕ್ತರಲ್ಲಿ ಹಚ್ಚ ಹಸಿರಾಗಿವೆ. ನುಡಿನಮನ ಕಾರ್ಯಕ್ರಮ 10 ದಿನಗಳ ಕಾಲ ನಡೆಯಲಿದ್ದು, ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಯಲು ಸಕಲ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿವೆ. ಲಕ್ಷಾಂತರ ಅಭಿಮಾನಿಗಳು ಕೂಡಾ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾತರರಾಗಿದ್ದಾರೆ.
ಶ್ರೀಗಳ ಜನ್ಮಸ್ಥಳ ಬಿಜ್ಜರಗಿ ಗ್ರಾಮದಲ್ಲಿ ಎತ್ತುಗಳನ್ನು ಉಳಿಸುವ ವಿಶೇಷ ಜನಜಾಗೃತಿ ಕಾರ್ಯಕ್ರಮ: ಗುರುನಮನ ಮತ್ತು ನುಡಿನಮನ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾದ್ಯಂತ ನಾನಾ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಅವರ ಜನ್ಮಸ್ಥಳ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ರೈತ ದಿನಾಚರಣೆಯ ದಿನ ಹಾಗೂ ಶ್ರೀಗಳು ಲಿಂಗೈಕ್ಯರಾದ ವೈಕುಂಠ ಏಕಾದಶಿಯ ದಿನದ ಅಂಗವಾಗಿ ಇಂದು ಅನ್ನದಾತನ ಬೆನ್ನೆಲುಬಾದ ಎತ್ತುಗಳನ್ನು ಉಳಿಸುವ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅವರು ಜನಿಸಿದ ಮನೆಯಿಂದ ಅವರು ಆಧ್ಯಾತ್ಮಿಕ ಪ್ರಪಂಚಕ್ಕೆ ಪಾದಾರ್ಪಣೆ ಮಾಡಲು ಪ್ರೇರಣೆ ನೀಡಿದ ಸನ್ಯಾಸಪ್ಪನ (ರಾಮೇಶ್ವರ) ಮಠಕ್ಕೆ ಗ್ರಾಮದ ಎಲ್ಲಾ ಜೋಡೆತ್ತುಗಳ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಜೋಡೆತ್ತುಗಳಿಗೆ ತಲಾ ಹನ್ನೊಂದು ಸಾವಿರದಂತೆ ಮೊದಲ ಕಂತಿನಲ್ಲಿ ರೂ. 5500 ಗಳಂತೆ 'ನಂದಿ ಸೇವಾ ಪ್ರೋತ್ಸಾಹ ಧನ'ವನ್ನು ಅಭಿ ಫೌಂಡೇಶನ್ ವತಿಯಿಂದ ನೀಡಲಾಯಿತು. ಇದೇ ಸಂದರ್ಭದಲ್ಲಿ ಫೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಅವರು ಬರೆದ 'ರೈತ ರಾಜಕೀಯ ಎಂಬ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಮಸೂತಿಯ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ತಿಕೋಟಾದ ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿ, ಶ್ರೀ ಶರಣಯ್ಯ ಹಿರೇಮಠ, ನಿಂಗಯ್ಯ ಮಠಪತಿ ಹಾಗೂ ಶಕ್ರಯ್ಯ ಹಿರೇಮಠ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ: ಸಚಿವ ಎಂ ಬಿ ಪಾಟೀಲ್