ಕರ್ನಾಟಕ

karnataka

ETV Bharat / state

ಪವಾಡ ಪುರುಷ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ.. - ದಲಿತ ಮಹಿಳೆಯಿಂದ ಕಳಸದಾರತಿ

ವಿಜಯನಗರ ಜಿಲ್ಲೆಯ ಪುಣ್ಯ ಕ್ಷೇತ್ರ ಕೊಟ್ಟೂರದ ಪವಾಡ ಪುರುಷ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ಸಂಭ್ರಮದಿಂದ ನೆರವೇರಿತು.

Shri Guru Kottureshwara Rathotsava is grand
ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ

By

Published : Feb 17, 2023, 6:30 AM IST

ವಿಜಯನಗರ:ಜಿಲ್ಲೆಯ ಶ್ರೀ ಕ್ಷೇತ್ರ ಕೊಟ್ಟೂರಿನ ಪವಾಡ ಪುರುಷ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ ಸಂಭ್ರಮದಿಂದ ನೆರವೇರಿತು. ಆಗಮಿಸಿದ್ದ ಲಕ್ಷಾಂತರ ಭಕ್ತರು ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ಕಣ್ತುಂಬಿಸಿಕೊಂಡರು. ಅತಿ ಎತ್ತರದ ಈ ತೇರನ್ನು ಶ್ರೀಗಳ ಕ್ಷೇತ್ರದಲ್ಲಿ ಲಕ್ಷಾಂತರ ಭಕ್ತರ ಸಮೂಹದಲ್ಲಿ ಮೂಲ ನಕ್ಷತ್ರ ದಿನ ಎಳೆಯಲಾಗುತ್ತಿದೆ. ಆದರೆ ಈ ರಥೋತ್ಸವವನ್ನು ಕಣ್ಣು ತುಂಬಿಕೊಳ್ಳಲು ಎರಡು ಕಣ್ಣು ಸಾಲುವುದಿಲ್ಲ.

4 ಲಕ್ಷಕ್ಕೂ ಅಧಿಕ ಭಕ್ತರು :ಈ ಬಾರಿ ಅಂದಾಜು 4-5 ಲಕ್ಷಕ್ಕೂ ಅಧಿಕ ಭಕ್ತರು ಕೊಟ್ಟೂರೇಶ್ವರ ಜಾತ್ರೆಗೆ ಆಗಮಿಸಿ ಪವಾಡ ಪುರುಷ ಗುರುಕೊಟ್ಟೂರೇಶ್ವರ ಕೃಪೆಗೆ ಪಾತ್ರರಾದರು. ರಥೋತ್ಸವಕ್ಕೆ ರಾಜ್ಯ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು.

ಇಷ್ಟಾರ್ಥ ಈಡೇರಿಕೆಗೆ ಭಕ್ತರ ಕಾಲ್ನಡಿಗೆ:ಶ್ರೀ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಬೇಡಿಕೊಳ್ಳುವ ಇಷ್ಟಾರ್ಥಗಳು ಶ್ರೀ ಗುರು ಕೊಟ್ಟೂರೇಶ್ವರ ಈಡೇರಿಸುವನು ಅನ್ನೋ ನಂಬಿಕೆ ಇದೆ. ಇನ್ನೂ ಶ್ರೀ ಕ್ಷೇತ್ರಕ್ಕೆ ಬಹಳಷ್ಟು ಭಕ್ತರು ಜಾತ್ರೆಗಾಗಿ ನೂರಾರು ಕಿಲೋ ಮೀಟರ್​ನಿಂದ ಪಾದಯಾತ್ರೆ ಮೂಲಕ ಬರುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿಕೆಗೆ ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ, ಗುರು ಕೊಟ್ಟೂರೇಶ್ವರನ ಕೃಪೆಗೆ ಪಾತ್ರರಾದರು.

ಭಕ್ತರಿಗೆ ಪ್ರಸಾದ ವ್ಯವಸ್ಥೆ: ಇನ್ನೂ ಶ್ರೀ ಕ್ಷೇತ್ರಕ್ಕೆ ಜಾತಿ ಮತ ಪಂಥ ಭೇದ ಭಾವವಿಲ್ಲದೇ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಬರುವ ಭಕ್ತರಿಗೆ ತಂಪು ಪಾನೀಯ, ಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ.ಶ್ರೀಗುರು ಕೊಟ್ಟೂರೇಶ್ವನಿಗೆ ಎಲ್ಲ ಧರ್ಮಿಯ ಭಕ್ತರಿದ್ದಾರೆ.

ದಲಿತ ಮಹಿಳೆಯಿಂದ ಕಳಸದಾರತಿ,ಧೂಪದಾರತಿ: ಹೌದು ಪವಾಡಗಳಿಂದ ಭಕ್ತರ ಆರಾಧ್ಯ ದೈವ ಆಗಿರುವ ಗುರು ಕೊಟ್ಟೂರೇಶ್ವರ ರಥೋತ್ಸವಕ್ಕಿಂತ ಮುಂಚೆ ಸ್ವಾಮಿಯ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆ ಮಾಡಲಾಗುತ್ತದೆ. ದಿನವಿಡೀ ಉಪವಾಸ ಇರುವ ದಲಿತ ಮಹಿಳೆಯಿಂದ ಪಲ್ಲಕ್ಕಿಯಲ್ಲಿರುವ ಸ್ವಾಮಿಗೆ ಕಳಸದಾರತಿ, ಧೂಪದಾರತಿ ಮಾಡುವರು. ದಲಿತ ಮಹಿಳೆ ಆರತಿ ಮಾಡಿದ ಬಳಿಕ ಪಲ್ಲಕ್ಕಿ ಉತ್ಸವ ತೇರು ಬಜಾರ್ ಮೂಲಕ ಸಾಗಿ ರಥೋತ್ಸವ ಜರುಗುವ ಸ್ಥಳಕ್ಕೆ ಬರುತ್ತದೆ.

ವಿವಿಧ ವಾದ್ಯಮೇಳದ ಮೆರಗು: ಸಮಾಳ, ನಂದಿಕೋಲು ಸೇರಿದಂತೆ ಮತ್ತಿತರ ವಾದ್ಯಗಳು ರಥೋತ್ಸವಕ್ಕೆ ಮೆರಗು ತರುತ್ತವೆ. ಪಲ್ಲಕ್ಕಿಯನ್ನೂ ರಥದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ರಥದ ಒಳಗೆ ಸ್ವಾಮಿಯನ್ನು ಕೊಂಡೊಯ್ಯಲಾಗುತ್ತದೆ. ನಂತರ ರಥವನ್ನು ಪಾದಗಟ್ಟೆ ಬಸವೇಶ್ವರ ದೇವಸ್ಥಾನದ ವರೆಗೆ ಎಳೆದು, ಮತ್ತೇ ಪಾದಗಟ್ಟೆಯಿಂದ ರಥಬೀದಿ ಗುಂಟ ಸಾಗುತ್ತದೆ.

ಕೊಟ್ಟೂರು ದೊರೆಯೇ ನಿನಗಾರು ಸರಿಯೇ: ಇನ್ನೂ ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ಕೊಟ್ಟೂರು ದೊರೆಯೇ, ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲು ಮುರಿವೆ ಬಹುಪರಾಕ್ ಅಂತಾ ಘೋಷಣೆಯನ್ನೂ ಮೊಳಗಿಸಿದರು. ಈ ಸಂದರ್ಭದಲ್ಲಿ ಭಕ್ತರು ಬಾಳೆ,ಹಣ್ಣುಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.

ಭಕ್ತರ ಗಣ:ಎರಡು ವರ್ಷ‌ ಕೊರೊನಾ ಬಳಿಕ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.ಅದೇ ಏನೇ ಇರಲೀ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರರ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಸಮಾಪ್ತಿಗೊಂಡಿತು.

ಇದನ್ನೂ ಓದಿ:ಏರೋ ಇಂಡಿಯಾದಲ್ಲಿ ಆ್ಯಂಟಿ ಡ್ರೋನ್ ಡಿವೈಸ್​ಗಳದ್ದೇ ಮಾತು, ಚರ್ಚೆ

ABOUT THE AUTHOR

...view details