ವಿಜಯಪುರ: ಭೀಮಾತೀರದ ರಕ್ತಸಿಕ್ತ ಇತಿಹಾಸದ ಭಾಗವಾಗಲು 20-23 ವಯಸ್ಸಿನ ಯುವಕರು ಹವಣಿಸುತ್ತಿದ್ದಾರೆ ಎನ್ನುವ ಶಾಕಿಂಗ್ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.
ಹೌದು, ಹಣ ಹಾಗೂ ಹೆಸರು ಗಳಿಸಲು, ಅಪರಾಧ ಕೃತ್ಯದಲ್ಲಿ ತೊಡಗಿಕೊಳ್ಳಲು ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಇವರಿಗೆಲ್ಲ ಸ್ಫೂರ್ತಿ ಎನ್ನುವ ಮಾಹಿತಿ ಸಹ ಲಭ್ಯವಾಗಿದೆ. ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆ ನಡೆಸಿ ರಾತ್ರೋರಾತ್ರಿ ಭೀಮಾತೀರದಲ್ಲಿ ತಮ್ಮ ಹವಾ ಸೃಷ್ಟಿಸಬೇಕೆನ್ನುವ ಖಯಾಲಿಗೆ ಬಿದ್ದು ಯುವಕರು ಭೈರಗೊಂಡ ಹತ್ಯೆಗೆ ಸ್ಕೆಚ್ ಹಾಕಿರುವುದು ತನಿಖೆಯಿಂದ ತಿಳಿದುಬಂದಿದೆ.
ತನಿಖೆ ವೇಳೆ ಬಯಲಾದ ವಿಚಾರ:
ಮೊನ್ನೆ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಶೂಟೌಟ್ ಇದರ ಮೊದಲ ಭಾಗವಾಗಿತ್ತು. ಇನ್ನೂ ಸರಿಯಾಗಿ ಬಂದೂಕು ಹಿಡಿಯಲು ಬಾರದ ಯುವಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅಲ್ಲದೇ, ಡಿಎಂಸಿ ಎಂಬ ತಂಡವನ್ನು ಕಟ್ಟಿಕೊಂಡಿದ್ದರು. ಇವರಿಗೆ ಮಡಿವಾಳಯ್ಯ ಹಿರೇಮಠ ಎಂಬಾತ ಲೀಡರ್ ಎನ್ನಲಾಗ್ತಿದೆ. ಧರ್ಮರಾಜ್ ಚಡಚಣ ಎನ್ಕೌಂಟರ್ಗೆ ಪ್ರತೀಕಾರವಾಗಿ ಮಹಾದೇವ ಸಾಹುಕಾರ ಭೈರಗೊಂಡನನ್ನು ಮುಗಿಸಿ ಭೀಮಾತೀರದಲ್ಲಿ ತಾವು ಮೆರೆಯಬಹುದು ಎಂದು ಮಡಿವಾಳಯ್ಯ ಇವರ ತಲೆಗೆ ತುಂಬಿರುವ ಮಾಹಿತಿ ಪೊಲೀಸ್ ತನಿಖೆ ವೇಳೆ ಬಯಲಾಗಿದೆ ಎಂದು ಹೇಳಲಾಗ್ತಿದೆ.
ಕೃತ್ಯ ಎಸಗಲು ಸಿದ್ಧತೆ:
ಕೃತ್ಯ ಎಸಗುವ ಮೊದಲ ಒಂದು ವಾರವಷ್ಟೇ ಕೆಲ ಯುವಕರಿಗೆ ಬಂದೂಕು ತರಬೇತಿ ನೀಡಲಾಗಿತ್ತು. ಪುಣೆ, ವಿಜಯಪುರ, ಉಮರಾಣಿ ಸೇರಿದಂತೆ ವಿವಿಧ ಕಡೆಯಲ್ಲಿ ವಾಸವಿದ್ದ, ಕಾಲೇಜು ಬಿಟ್ಟಿದ್ದ ಯುವಕರನ್ನು ಹುರಿದುಂಬಿಸಿ ಈ ಕೃತ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆಗೆ ಜನವರಿಯಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆತನ ಚಲನವಲನ ಗಮನಿಸಿದ್ದ ಯುವಕರು 17 ಕಡೆಗಳಲ್ಲಿ ತಂಡ ತಂಡವಾಗಿ ಮಹಾದೇವ ಸಾಹುಕಾರ ಹತ್ಯೆಗೆ ಸಮಯ ನಿಗದಿಪಡಿಸಿದ್ದರು ಎನ್ನಲಾಗ್ತಿದೆ.