ವಿಜಯಪುರ: ಏಷ್ಯಾದ ಎರಡನೇ ಅತಿದೊಡ್ಡ ಶಿವನಮೂರ್ತಿ ಹೊಂದಿರುವ ವಿಜಯಪುರ ನಗರದ ಶಿವಗಿರಿಯಲ್ಲಿ ಈ ಬಾರಿ ಕರೋನಾ ಭೀತಿ ಕಾರಣ ಮಹಾ ಶಿವರಾತ್ರಿಯನ್ನು ಸರಳ ಆಚರಣೆ ಜತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಶಿವಗಿರಿಯಲ್ಲಿನ ಶಿವನ ಬೃಹತ್ ಮೂರ್ತಿ ಸ್ಥಾಪಿಸಿ 16 ವರ್ಷಗಳು ಕಳೆದಿವೆ. ಶಿವಗಿರಿಯ ಉಸ್ತುವಾರಿ ನಿರ್ವಹಿಸುತ್ತಿರುವ ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್ ಈ ವರ್ಷದ ಉತ್ಸವವನ್ನು ಧಾರ್ಮಿಕ ಶ್ರದ್ಧಾ–ಭಕ್ತಿಯ ಆಚರಣೆಗೆ ಮಾತ್ರ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಹರಡಬಾರದು ಎಂಬ ಉದ್ದೇಶದಿಂದ ಸಾಂಕೇತಿಕವಾಗಿ ಆಚರಿಸಲು ಕಾರ್ಯಕ್ರಮ ಆಯೋಜಿಸಿದೆ. ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಶಿವಗಿರಿಯ ಟಿ.ಕೆ. ಪಾಟೀಲ ಚಾರಿಟೇಬಲ್ ಟ್ರಸ್ಟ್ ಮಂಗಳವಾರ ಬೆಳಗ್ಗೆ 4.30ಕ್ಕೆ ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಪಂಚ ಕಳಸಾರ್ಚನೆ ಬಳಿಕ ಪ್ರತಿ ಗಂಟೆಗೊಮ್ಮೆ ಪೂಜೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.