ಮುದ್ದೇಬಿಹಾಳ:ಪಟ್ಟಣದ ವಿಬಿಸಿ ಹೈಸ್ಕೂಲ್ ಮುಂಭಾಗದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಟಿಪ್ಪರ್ ವೊಂದು ಡಿಕ್ಕಿ ಹೊಡೆದು ಧಕ್ಕೆಗೊಳಿಸಿದ ಹಿನ್ನೆಲೆಯಲ್ಲಿ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ದಿಢೀರ್ ಪ್ರತಿಭಟನೆಗೆ ಮುಂದಾದರು.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಘಮೋಡೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಮುಂದಾಗಿದ್ದವರ ಜೊತೆಗೆ ಮಾತುಕತೆ ನಡೆಸಲು ಮುಂದಾದರು.
ಈ ವೇಳೆ ಮಾತನಾಡಿದ ಮುಖಂಡರಾದ ಸಂಗಣ್ಣ ಮೇಲಿನಮನಿ, ವಕೀಲ ಸಿದ್ದನಗೌಡ ಬಿರಾದಾರ, ಪರಶುರಾಮ ನಾಗರಬೆಟ್ಟ, ಕುರುಬರ ಸಂಘದ ಉಪಾಧ್ಯಕ್ಷ ಸಂತೋಷ ನಾಯ್ಕೋಡಿ ಮೊದಲಾದವರು, ಸಂಗೊಳ್ಳಿ ರಾಯಣ್ಣ ವೃತ್ತದ ಬಗ್ಗೆ ಪುರಸಭೆ ಆಡಳಿತ ನಿರ್ಲಕ್ಷ ವಹಿಸಿದೆ. ರಸ್ತೆ ಕಾಮಗಾರಿ ಮಾಡುವ ಗುತ್ತಿಗೆದಾರರ ಕಡೆಯುವರು ವೃತ್ತ ಮರುನಿರ್ಮಾಣ ಮಾಡುವುದಾಗಿ ಹೇಳಿದ್ದರೂ ಕೆಳಮಟ್ಟದಲ್ಲಿಯೇ ಇತ್ತು. ಇಂದು ವಾಹನ ಹಾಯ್ದು ಕಂಬ ಮುರಿದಿದೆ. ಇದರಿಂದ ರಾಯಣ್ಣನ ಅಭಿಮಾನಿಗಳಿಗೆ ನೋವಾಗಿದೆ ಎಂದು ಹೇಳಿದರು.