ಮುದ್ದೇಬಿಹಾಳ (ವಿಜಯಪುರ): ಸದಾಶಿವ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಾದಿಗ ದಂಡೋರ ಯುವ ಸೇನೆ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಶಾಸಕರಿಗೆ ಹಾಗೂ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾದಿಗ ದಂಡೋರ ಯುವ ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ನಿವಾಸದವರೆಗೆ ಪ್ರತಿಭಟನಾಕಾರರು ರ‍್ಯಾಲಿ ನಡೆಸಿ ಶಾಸಕರ ನಿವಾಸಕ್ಕೆ ಆಗಮಿಸಿದರು. ಬಳಿಕ ಶಾಸಕರಿಗೆ ಬರೆದಿದ್ದ ಮನವಿಯನ್ನು ಆಪ್ತ ಸಹಾಯಕ ಬಸನಗೌಡ ಪಾಟೀಲ್ ಅವರಿಗೆ ಸಲ್ಲಿಸಿದರು.
ದಲಿತ ಮುಖಂಡ ಡಿ.ಬಿ.ಮುದೂರ ಮಾತನಾಡಿ, ರಾಜ್ಯದಲ್ಲಿ ಮಾದಿಗರು ಸಂವಿಧಾನ ಬದ್ಧ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿಯ ವರ್ಗೀಕರಣನ್ನು ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಕಲ್ಪಿಸಲು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದು, ಅದರಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಮಾದಿಗ ದಂಡೋರ ಯುವ ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ ವಕೀಲ ಕೆ.ಬಿ. ದೊಡ್ಡಮನಿ ಮಾತನಾಡಿ, ಬಿಜೆಪಿ ಸರ್ಕಾರ ಇದ್ದಾಗಲೇ ಸದಾಶಿವ ಆಯೋಗವನ್ನು ರಚಿಸಲಾಗಿದ್ದು, ಸದ್ಯಕ್ಕೆ ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಇದೇ ತಿಂಗಳು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಾದಿಗರ ಪರವಾಗಿ ಕ್ಷೇತ್ರದ ಶಾಸಕರಾದ ಎ.ಎಸ್. ಪಾಟೀಲ್ ಅವರು ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.