ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಯ ಗೌರವಾರ್ಥ ವೃಕ್ಷಥಾನ್ ಹೆರಿಟೇಜ್ ರನ್ 'ರನ್ ವಿಜಯಪುರ ರನ್' ಇಂದು ಯಶಸ್ವಿಯಾಗಿ ನಡೆಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ಗೋಳಗುಮ್ಮಟ ಮಾರ್ಗವಾಗಿ ಒಟ್ಟು 21 ಕಿಲೋ ಮೀಟರ್, 10 ಕಿ.ಮೀ, 5 ಕಿ.ಮೀ, 3.50 ಕಿ.ಮೀ ಮತ್ತು 800 ಮೀಟರ್ ವಿಭಾಗಗಳಲ್ಲಿ ವೃಕ್ಷಥಾನ್ ಹೆರಿಟೇಜ್ ಓಟಗಳು ನಡೆದವು. ಹಲವು ಗಣ್ಯರು ಪಾಲ್ಗೊಂಡು ಪರಿಸರ ಜಾಗೃತಿ ಮೂಡಿಸಿದರು.
ವಿಜಯಪುರದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಕುಟುಂಬ ಸಮೇತರಾಗಿ ವೃಕ್ಷಥಾನ್ನಲ್ಲಿ ಪಾಲ್ಗೊಂಡರು. ನಗರದ ಸಾರ್ವಜನಿಕರು ಚಪ್ಪಾಳೆ ತಟ್ಟಿ, ರನ್ ರನ್ ಎಂದು ಮ್ಯಾರಥಾನ್ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, "ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕೇವಲ ಶೇ. 0.17ರಷ್ಟು ಮಾತ್ರ ಇದ್ದ ಸಂದರ್ಭದಲ್ಲಿ ವೃಕ್ಷಥಾನ್ ಆಂದೋಲನ ಆರಂಭಿಸಲಾಯಿತು. ಇದುವರೆಗೆ ಸುಮಾರು 1.5 ಕೋಟಿ ಸಸಿಗಳನ್ನು ನೆಡಲಾಗಿದ್ದು, ಈಗ ಹಸುರಿನ ವ್ಯಾಪ್ತಿ ಶೇ. 2ನ್ನು ಮುಟ್ಟಿದೆ. ಆದರೆ, ಇದು ಶೇ.30ರಿಂದ 35ರ ಪ್ರಮಾಣಕ್ಕೆ ತಲುಪಬೇಕೆಂದರೆ ನಾವು ಸಾಗಬೇಕಾದ ದಾರಿ ಇನ್ನೂ ತುಂಬಾ ಇದೆ. ಇಲ್ಲಿ ನಾವು ನಡೆಸುತ್ತಿರುವ ವೃಕ್ಷಥಾನ್ ಎಲ್ಲರ ಬೆಂಬಲದಿಂದ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಯಶಸ್ಸು ಕಾಣುತ್ತಿದೆ. ಮುಂದಿನ ವರ್ಷದಿಂದ ಜಿಲ್ಲೆಯ ಹಳ್ಳಿಗಳನ್ನೂ ಇದರಲ್ಲಿ ಒಳಗೊಳ್ಳಿಸಿಕೊಳ್ಳಲು ಯೋಜನೆ ರೂಪಿಸೋಣ" ಎಂದರು.