ವಿಜಯಪುರ:ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿಗಳಿಗಾಗಿ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಿರುತ್ತಾರೆ. ಆದರೆ, ವಿಜಯಪುರ ನಗರದಲ್ಲಿ ಆ ಸ್ಥಳವೋ ವ್ಯಾಪಾರಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಇನ್ನೂ ಸಂಚಾರ ನಿಯಮಗಳು ಇಲ್ಲಿ ಲೆಕ್ಕಕ್ಕೆ ಇಲ್ಲವಾಗಿದೆ. ಕೇವಲ ಹೆಸರಿಗೆ ಮಾತ್ರ ಸಿಗ್ನಲ್ಗಳು ಕಾರ್ಯ ನಿರ್ವಹಿಸುತ್ತಿವೆ. ಇವು ಪೊಲೀಸರಿಗೆ ದಂಡ ವಸೂಲಿ ಮಾಡುವ ಕಾರ್ಯಾಲಯಗಳಾಗಿವೆ.
ಐತಿಹಾಸಿಕ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ 83ಕ್ಕೂ ಅಧಿಕ ಸ್ಮಾರಕಗಳಿವೆ. ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ವಿಜಯಪುರ ನಗರಕ್ಕೆ ಪ್ರವಾಸಿಗರ ಬರುವುದೇ ಕಡಿಮೆಯಾಗಿದೆ. ಇದಕ್ಕೆ ಕಾರಣ ರಸ್ತೆ ಅವ್ಯವಸ್ಥೆ. ಇದರ ಜತೆ ಪಾದಚಾರಿಗಳಿಗೆ ಮೀಸಲಾಗಿರುವ ರಸ್ತೆ ಸಹ ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿರುವುದು. ಸಣ್ಣ ಪುಟ್ಟ ವ್ಯಾಪಾರಿಗಳು ಪಾದಚಾರಿ ಜಾಗ ಅತಿಕ್ರಮಣ ಮಾಡಿಕೊಂಡಿರುವ ಕಾರಣ ಪಾದಚಾರಿಗಳು ರಸ್ತೆಯಲ್ಲಿ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ. ಮೊದಲೇ ಇಕ್ಕಟ್ಟಿನ ಜಾಗದಲ್ಲಿ ವಾಹನ ನಿಲ್ದಾಣ ಜಾಗ, ಪಾದಚಾರಿ ಜಾಗಕ್ಕೆ ಸ್ಥಳವಿಲ್ಲ ಹೀಗಿರುವಾಗ ವ್ಯಾಪಾರಿಗಳು ಇದ್ದ ಸ್ವಲ್ಪ ಜಾಗ ಅತಿಕ್ರಮಿಸಿದ್ದಾರೆ.
ಪಾದಚಾರಿ ಜಾಗವನ್ನು ಅತಿಕ್ರಮಿಸಿಕೊಂಡ ರಸ್ತೆ ಬದಿ ವ್ಯಾಪಾರಿಗಳು ಇನ್ನು ಸಂಚಾರಿ ನಿಯಮ ಪಾಲನೆಯಾಗುತ್ತಿಲ್ಲ. ಸಿಗ್ನಲ್ ಬಳಿ ಪಾದಚಾರಿಗಳು ರಸ್ತೆ ದಾಟಬೇಕಾದರೆ ಯಾವುದೇ ಝಿಬ್ರಾ ಕ್ರಾಸ್ಗಳಾಗಲಿ, ಬಿಳಿ ಬಣ್ಣದಿಂದ ರಸ್ತೆ ದಾಟುವ ಕೇಂದ್ರಗಳಾಗಲಿ ಇಲ್ಲವೇ ಇಲ್ಲ. ಜನ ಎಲ್ಲೆಂದರಲ್ಲಿ ನುಗ್ಗುವುದು ಸಾಮಾನ್ಯವಾಗಿದೆ. ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಬರದಿಂದ ಸಾಗಿವೆ. ಆದರೆ, ಕೆಲವರು ಕಂಡ ಕಂಡಲ್ಲಿ ವ್ಯಾಪಾರ ಮಾಡುತ್ತಿರುವ ಕಾರಣ ಸಾಕಷ್ಟು ತೊಂದರೆಯಾಗುತ್ತಿದೆ.
ನಗರದ ಪ್ರಮುಖ ರಸ್ತೆಯಾಗಿರುವ ಕೇಂದ್ರ ಬಸ್ ನಿಲ್ದಾಣ ಹಾಗೂ ಗಾಂಧಿ ಸರ್ಕಲ್ ಪ್ರಮುಖ ರಸ್ತೆಗಳು ಸಾಕಷ್ಟು ಅತಿಕ್ರಮಣವಾಗಿವೆ. ಬೂಟ್ ಪಾಲಿಸ್, ತರಕಾರಿ ವ್ಯಾಪಾರಿಗಳು ಸೇರಿದಂತೆ ವಿವಿಧ ವ್ಯಾಪಾರಿಗಳು ಪಾದಚಾರಿ ಜಾಗ ಅತಿಕ್ರಮಣ ಮಾಡಿಕೊಂಡಿರುವ ಪರಿಣಾಮ ಪಾದಚಾರಿಗಳು ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಇದರ ಜತೆ ಪೊಲೀಸ್ ಇಲಾಖೆ ಸಹ ರಸ್ತೆ ನಿಯಮಗಳ ಬಗ್ಗೆ ಗಮನ ಹರಿಸುವ ಅವಶ್ಯಕತೆ ಇದೆ. ಹೆಲ್ಮೆಟ್, ಮಾಸ್ಕ್ ಇಲ್ಲ ಎಂದು ದಂಡ ಹಾಕುವ ಬದಲು ರಸ್ತೆ ನಿಯಮ ಪಾಲಿಸುವ ಜಿಬ್ರಾ ಕ್ರಾಸ್ ಸೇರಿ ಹಲವು ನಿಯಮಗಳನ್ನು ಪಾಲಿಸುವ ಅವಶ್ಯಕತೆ ಇದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.