ಮುದ್ದೇಬಿಹಾಳ :ಕೊರೊನಾ ವೈರಸ್ ಸೋಂಕಿತರ ಮನೆಯ ಸುತ್ತಮುತ್ತಲಿನ ಮನೆಯ ನಿವಾಸಿಗಳ ಭಾವಚಿತ್ರ ತೆಗೆದು ಕಳಿಸುವಂತೆ ಹೇಳಿರುವ ಕೆಲಸ ಅಧಿಕಾರಿಗಳಿಗೆ ಬಹುದೊಡ್ಡ ತಲೆನೋವು ತರಿಸಿದೆ. ಈ ಸಮಸ್ಯೆಯನ್ನು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್‌ರ ಬಳಿ ಅಳಲು ತೋಡಿಕೊಂಡಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಶನಿವಾರ ಬೆಳೆ ಸಮೀಕ್ಷೆ ಹಾಗೂ ಕೊರೊನಾ ಪರಿಸ್ಥಿತಿಯ ಅವಲೋಕನದ ಕುರಿತು ನಡೆದ ಕಂದಾಯ ಇಲಾಖೆಯ ನೌಕರರ ಸಭೆಯಲ್ಲಿ ಮಾತನಾಡಿದ ಗ್ರಾಮಲೆಕ್ಕಾಧಿಕಾರಿ ರಿಯಾಜ್ ನಾಯ್ಕೋಡಿ, ತಾಲೂಕಿನಲ್ಲಿ ಒಂದೊಂದು ದಿನ 15-20 ಕೋವಿಡ್-19 ಪ್ರಕರಣ ಕಂಡು ಬರುತ್ತಿವೆ.
ಅವರ ಜೊತೆಗೆ ಏನಿಲ್ಲವೆಂದರೂ 100-150 ಜನ ಪ್ರಾಥಮಿಕ ಸಂಪರ್ಕಿತರು ಬರುತ್ತಾರೆ. ಸೋಂಕಿತ ಸಂಪರ್ಕಿತರ ಮನೆಯ ಸದಸ್ಯರ ಜೊತೆಗೆ ನಿಂತು ಫೋಟೋಗಳನ್ನು ಕಳಿಸಬೇಕು ಎಂಬ ನಿಯಮದಿಂದ ಸಾರ್ವಜನಿಕರು ಇನ್ನುಳಿದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.