ಮುದ್ದೇಬಿಹಾಳ:ಡೋಣಿ ನದಿ ಪ್ರವಾಹದಲ್ಲಿ ಮಹಾರಾಷ್ಟ್ರ ಮೂಲದ ಇದ್ದಿಲು ಬಟ್ಟಿ ನಡೆಸುವ ಕುಟುಂಬವೊಂದು ಸಿಲುಕಿಕೊಂಡಿದ್ದು, ಜಿಲ್ಲಾಡಳಿತ ಉಪ ವಿಭಾಗಾಧಿಕಾರಿಗಳ ನೇತೃತ್ವದ ರಕ್ಷಣಾ ತಂಡ ತನ್ನ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.
ಡೋಣಿ ನದಿ ಪ್ರವಾಹಕ್ಕೆ ಸಿಲುಕಿದ ಕುಟುಂಬ, ಎನ್ಡಿಆರ್ಎಫ್ ನಿಂದ ರಕ್ಷಣಾ ಕಾರ್ಯ ಚುರುಕು ಎರಡು ದಿನಗಳ ಹಿಂದೆ ಡೋಣಿ ನದಿ ದಡದಲ್ಲಿನ ಜಮೀನಿನಲ್ಲಿ ದಂಪತಿ ಹಾಗೂ ಐವರು ಮಕ್ಕಳಿರುವ ಮಹಾರಾಷ್ಟ್ರ ಮೂಲದ ಕುಟುಂಬವೊಂದು ವಾಸಿಸುತ್ತಿತ್ತು. ಆದರೆ ಗುರುವಾರ ಏಕಾಏಕಿ ಪ್ರವಾಹ ಏರಿಕೆಯಾಗಿದ್ದರಿಂದ ಹೊಲದಲ್ಲಿರುವ ಬಣವೆಗಳ ಮೇಲೆ ಮಕ್ಕಳೊಂದಿಗೆ ದಂಪತಿ ಆಸರೆ ಪಡೆದಿದ್ದರು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ವೇಳೆ ಮಾಹಿತಿ ನೀಡಿದ್ದಾರೆ.
ಈಗ ಇರುವ ಪ್ರವಾಹದಲ್ಲಿ ಈಜುತ್ತಾ ಹೋಗಿ ಅವರನ್ನು ಕರೆತರುವುದು ಅಸಾಧ್ಯದ ಸಂಗತಿ. ನೀರು ಹೆಚ್ಚಾದರೆ ಆ ಕುಟುಂಬ ನೀರು ಪಾಲಾಗುವ ಭೀತಿ ಎದುರಾಗಿದೆ.
ಪ್ರವಾಹಕ್ಕೆ ಸಿಲುಕಿದವರ ಮಾಹಿತಿ ನೀಡಿದ ಸಿಬ್ಬಂದಿ:
ಪ್ರವಾಹದಲ್ಲಿ ಸಿಲುಕಿರುವ ಕುಟುಂಬವನ್ನು ಅಗ್ನಿಶಾಮಕ ಸಿಬ್ಬಂದಿ ಸಂತೋಷ ಲಮಾಣೆ, ಹಗ್ಗ ಹಿಡಿದು ಈಜುತ್ತಾ ಮಾತನಾಡಿಸಿಕೊಂಡು ಬಂದಿದ್ದಾರೆ. ಐವರು ಚಿಕ್ಕ ವಯಸ್ಸಿನ ಮಕ್ಕಳು, ಇಬ್ಬರು ದಂಪತಿ ಎತ್ತರದ ಪ್ರದೇಶದಲ್ಲಿದ್ದಾರೆ. ಸುರಕ್ಷಿತ ದಡಕ್ಕೆ ಈಜಿಕೊಂಡು ಬರಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ಅಲ್ಲಿ ನೀರು ಬರುವುದು ಗೊತ್ತಾಗುವುದಿಲ್ಲ. ಸದ್ಯಕ್ಕೆ ನೀರಿನ ಪ್ರಮಾಣ ಹೆಚ್ಚಾದರೆ ಅವರಿಗೆ ಅಪಾಯ ಇದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಸ್ಥಗಿತ:
ಡೋಣಿ ನದಿ ಸಮೀಪದಲ್ಲಿರುವ ನಡುಗಡ್ಡೆಯಲ್ಲಿ ಸಿಲುಕಿರುವ ಕುಟುಂಬದ ರಕ್ಷಣೆಗೆ ರಾತ್ರಿ ಸಮಯದಲ್ಲಿ ಪ್ರವಾಹ ಹೆಚ್ಚುವ ಭೀತಿ ಇದ್ದು, ಅಗತ್ಯ ಸಾಮಗ್ರಿಗಳನ್ನು ಅಲ್ಲಿ ಜೋಡಿಸಲು ಸೂಕ್ತ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಅ.16 ರಂದು ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆ ಮುಂದುವರೆಸುವುದಾಗಿ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಮಾಹಿತಿ ನೀಡಿದ್ದಾರೆ.
ರಕ್ಷಣೆಗೆ ಎನ್ಡಿಆರ್ಎಫ್ ತಂಡ:
ಕ್ಲಿಷ್ಟಕರ ಪರಿಸ್ಥಿತಿ ಇರುವ ಕಾರಣ ಜಿಲ್ಲೆಯಿಂದ ಎನ್ಡಿಆರ್ಎಫ್ ತಂಡ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸುವಂತೆ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಡಿಸಿ ಆದೇಶದನ್ವಯ ತಾಳಿಕೋಟಿ ಡೋಣಿ ನದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ದೌಡಾಯಿಸಿದೆ.