ಬೆಂಗಳೂರು/ಕಲಬುರಗಿ/ವಿಜಯಪುರ: ಸ್ವಾತಂತ್ರ್ಯ ದಿನದ ಪ್ರಯುಕ್ತ ಸನ್ನಡತೆ ತೋರುವ ಸಜಾಬಂಧಿಗಳನ್ನು ಬಿಡುಗಡೆ ಮಾಡುವ ಸಂಪ್ರದಾಯವನ್ನೂ ಈ ವರ್ಷವೂ ರಾಜ್ಯ ಕಾರಾಗೃಹ ಇಲಾಖೆ ಮುಂದುವರಿಸಿದೆ. ಸ್ವಾತಂತ್ರ್ಯ ದಿನದಂದು ರಾಜ್ಯದ ಜೈಲುಗಳಿಂದ ಇಬ್ಬರು ಮಹಿಳಾ ಕೈದಿ ಸೇರಿ ಒಟ್ಟು 81 ಮಂದಿ ಜೈಲು ಹಕ್ಕಿಗಳನ್ನು ಬಿಡುಗಡೆಯಾಗಿದ್ದಾರೆ.
ವಿವಿಧ ಅಪರಾಧವೆಸಗಿ ಶಿಕ್ಷಾ ಬಂಧಿಯಾಗಿರುವ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವುದು ಅಲಿಖಿತ ನಿಯಮ. ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟು ಬಿಡುಗಡೆ ಬಳಿಕ ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದು ಬಿಡುಗಡೆ ಹಿಂದಿನ ಉದ್ದೇಶವಾಗಿದೆ. ಅದರಂತೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ 14 ಸಜಾಬಂಧಿಗಳನ್ನು ಬಿಡುಗಡೆಗೊಳಿಸಲಾಗಿದೆ. ಬೆಳಗಾವಿ 3, ಬಳ್ಳಾರಿ 8, ವಿಜಯಪುರ 10, ಧಾರವಾಡ 6, ಕಲಬುರಗಿ 10, ಮೈಸೂರು 20, ಶಿವಮೊಗ್ಗ 9 ಹಾಗೂ ಶಿವಮೊಗ್ಗ ಮಹಿಳಾ ಜೈಲಿನಲ್ಲಿ ಓರ್ವ ಮಹಿಳಾ ಸಜಾಬಂಧಿಯನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಲಬುರಗಿ ಕೇಂದ್ರ ಕಾರಾಗೃಹದಿಂದ 10 ಬಂಧಿಗಳಿಗೆ ಮುಕ್ತಿ:ಕಾರಾಗೃಹದಲ್ಲಿ ನಡೆದ ಸರಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೃಷ್ಣಾಜಿ ಬಿ. ಪಾಟೀಲ, ವ್ಯಕ್ತಿಯು ಹುಟ್ಟಿನಿಂದ ಅಪರಾಧಿಯಲ್ಲ, ಸಂದರ್ಭಕ್ಕನುಸಾರವಾಗಿ ತಪ್ಪು ಮಾಡಿ ಜೈಲಿಗೆ ಬಂದಿರುತ್ತಾನೆ. ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾದ ಮೇಲೆ ಸುಧಾರಣೆಯ ಬದುಕಿನತ್ತ ಸಾಗಬೇಕು. ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ರಂಗನಾಥ್ ಅವರು ವಹಿಸಿದ್ದರು.