ವಿಜಯಪುರ:ಗ್ಯಾರಂಟಿ ಯೋಜನೆಗೆ ಅರ್ಜಿ ಹಾಕದಂತೆ ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಆರೋಪಕ್ಕೆ ಸಂಸದ ರಮೇಶ್ ಜಿಗಜಿಣಗಿ ಅವರು ಸತೀಶ್ ಜಾರಕಿಹೊಳಿ ಬುದ್ಧಿ ಅಷ್ಟೇ ಇದೆ ಎಂದು ಕಿಡಿಕಾರಿದರು.
ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸರ್ವರ್ ಹ್ಯಾಕ್ ಯಾಕೆ ಮಾಡ್ತಾರೆ? ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಹಾಸ್ಯಾಸ್ಪದವಾಗಿದೆ. ಈ ಆರೋಪದಿಂದ ಯಾವುದೇ ಉಪಯೋಗ ಇಲ್ಲ. ನಮ್ಮ ಮೇಲೆ ನೀವು, ನಿಮ್ಮ ಮೇಲೆ ನಾವು ಗೂಬೆ ಕೂರಿಸೋದು ಸರಿಯಲ್ಲ. ಸರ್ವರ್ ಡೌನ್ ಆಗೋಕೆ ನಮ್ಮವರು, ನಮ್ಮ ಕೇಂದ್ರ ಸರ್ಕಾರ ಕಾರಣ ಅಲ್ಲಾ ಎಂದು ಸ್ಪಷ್ಟಪಡಿಸಿದರು.
ಸರ್ವರ್ ದೇಶದಲ್ಲಿ ಎಲ್ಲ ಕಡೆ ಆಗಬೇಕಿತ್ತಲ್ಲ, ನಿಮ್ಮ ಊರಲ್ಲಿ ಮಾತ್ರ ಏಕೆ ಡೌನ್ ಆಯ್ತು..? ಎಂದು ಪ್ರಶ್ನಿಸಿದರು. ಇದರಲ್ಲಿ ನಿಮ್ಮದೆ ಜಾಲ ಯಾಕಿರಬಾರದು. ಪರೋಕ್ಷವಾಗಿ ಸರ್ವರ್ ಡೌನ್ ಹಿಂದೆ ಕಾಂಗ್ರೆಸ್‌ನದ್ದೇ ಜಾಲ ಇದೆ ಎಂದು ಜಿಗಜಿಣಗಿ ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ಮತ್ತು ಸತೀಶ್ ತಮಗೆ ತಿಳಿದಿದ್ದು ಹೇಳಲಿ, ಆದರೆ ನಾವು ತಿಳಿದಿದ್ದು ಹೇಳೋಕೆ ದಡ್ಡರಲ್ಲ. ಸತ್ಯವನ್ನೇ ಹೇಳ್ತೀವಿ, ಸತ್ಯ ಬಿಚ್ಚಿ ಹೇಳಿದ್ರೆ ನಮ್ಮ ಮರ್ಯಾದೆ ಏನು ಕಡಿಮೆ ಆಗಲ್ಲ ಎಂದರು.
ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಅಕ್ಕಿ ಘೋಷಣೆ ಮಾಡುವಾಗ ಲುಂಗಿ ಮೇಲೇರಿಸಿ 10 ಕೆ.ಜಿ ಅಕ್ಕಿ ಎಂದು ಘೋಷಣೆ ಮಾಡಿದರು. ಆದರೆ ಕೇಂದ್ರ ಕೊಡ್ತಿದ್ದ 5 ಕೆ.ಜಿ ಅಕ್ಕಿಯನ್ನ ಪ್ರಸ್ತಾಪಿಸಲೇ ಇಲ್ಲ. ಕೇಂದ್ರದ ಅಕ್ಕಿ ಹೊರತುಪಡಿಸಿ ತಾವೇ 10 ಕೆ.ಜಿ ಕೊಡ್ತೇವೆ ಎಂದು ಸ್ಪಷ್ಟವಾಗಿ ಹೇಳದೆ ಜನರಿಗೆ ಮೋಸ ಮಾಡಿದ್ದಾರೆ. ಎಲೆಕ್ಷನ್ ಸಮಯದಲ್ಲಿ ಜನರಿಗೆ ಸ್ಪಷ್ಟತೆ ನೀಡದೆ ಮೋಸ ಮಾಡಿದ್ದಾರೆ. ಕೇಂದ್ರ 5 ಕೆ.ಜಿ ಕೊಡುತ್ತೆ ಅಂತಾ ಹೇಳಿದ್ರೆ ಮರ್ಯಾದೆ ಹೋಗ್ತಿತ್ತಾ?? ಎಂದು ಪ್ರಶ್ನಿಸಿದ ಜಿಗಜಿಣಗಿ, ಮಾಧ್ಯಮಗಳಲ್ಲಿನ ಇವರ ಹೇಳಿಕೆ ಜನರಿಗೆ ಹೇಸಿಗೆ ತರುವಂತೆ ಆಗಿದೆ. ಇದು ಮಾಡಬಾರದು, ಒಳ್ಳೆಯದಲ್ಲ ನಮಗೇನು ಬಡವರು ಬೇಡವಾಗಿದ್ದಾರಾ? ಬಡವರು ನಮಗೇನು ವೋಟು ಹಾಕಿಲ್ವಾ ಎಂದು ಪ್ರಶ್ನಿಸಿದರು.
10 ಕೆ.ಜಿ ಅಕ್ಕಿ ಕೊಡೋಕೆ ನಾವೇನು ಬೇಡ ಅಂದಿಲ್ಲ. ನಮ್ಮದು ಸೇರಿ 10 ಕೆ.ಜಿ ಅಂತಾದ್ರು ಹೇಳಲಿ. ಅಥವಾ ಕೇಂದ್ರ ಸರ್ಕಾರದ ಯೋಜನೆ ಹೊರತು ಪಡಿಸಿ 10 ಕೆ.ಜಿ ಅಕ್ಕಿ ಕೊಡುವುದಾಗಿ ಅಂತಾದ್ರೂ ಹೇಳಲಿ. ಆಗ ಜನರಿಗೆ ಸ್ಪಷ್ಟನೆ ಸಿಗುತ್ತೆ. ಕೇಂದ್ರ ನೀಡ್ತಿರುವ 5 ಕೆ.ಜಿ ಅಕ್ಕಿ ಮರೆಮಾಚಿ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಬೇಡಿ. ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ಅಕ್ಕಿ ವಿತರಣೆ ಮಾಡಿತ್ತು. ಆ ವೇಳೆ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಪ್ರತಿ ರಸ್ತೆಗಳಲ್ಲಿ ಹೆಣಗಳೆ ಕಾಣಸಿಗುತ್ತಿದ್ದವು ಎಂದು ಸಂಸದರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಹಾಕಲು ಸರ್ವರ್ ಸಮಸ್ಯೆ.. ನಮ್ಮ ಮಷಿನ್ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ: ಬಿಜೆಪಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್!