ವಿಜಯಪುರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ(Ramesh Jarkiholi) ಇಂದು ಸಂಜೆ ವಿಜಯಪುರಕ್ಕೆ ಆಗಮಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್(MLA basanagowda patil Yatnal) ಅವರ ಹೊರವಲಯದ ತೋಟದ ನಿವಾಸಕ್ಕೆ ತೆರಳಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಲೈಂಗಿಕ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಈಗ ಮತ್ತೊಮ್ಮೆ ಸಚಿವ ಸ್ಥಾನಕ್ಕೆ ಎಲ್ಲಿಲ್ಲದ ಕಸರಸ್ತು ನಡೆಸುತ್ತಿರುವ ಬೆನ್ನಲ್ಲೆ ಯತ್ನಾಳ್ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಯತ್ನಾಳ್ ಭೇಟಿಯಾದ ಜಾರಕಿಹೊಳಿ ಸುಮಾರು 1 ಗಂಟೆಗಳ ಕಾಲ ರಹಸ್ಯ ಮಾತುಕತೆ(Secret talks)ನಡೆಸಿದ್ದಾರೆ ಎನ್ನಲಾಗಿದೆ. ಮಾಧ್ಯಮದವರ ಕಣ್ಣು ತಪ್ಪಿಸಿ ಬಸನಗೌಡ ಪಾಟೀಲ ಯತ್ನಾಳ್ ಅವರ ತೋಟದ ನಿವಾಸದಲ್ಲಿ ಭೇಟಿಯಾಗಿರುವುದು ಬಿಜೆಪಿ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ರಮೇಶ್ ಜಾರಕಿಹೊಳಿ ಹಾಗೂ ಯತ್ನಾಳ್ ರಹಸ್ಯ ಮಾತುಕತೆ ಬಿಟ್ ಕಾಯಿನ್ ಹಗರಣದಲ್ಲಿ(bitcoin scam)ಸರ್ಕಾರ ಹಾಗೂ ವಿರೋಧ ಪಕ್ಷಗಳ ಮಧ್ಯೆ ಆರೋಪ-ಪ್ರತ್ಯಾರೋಪ ನಡೆಯುತ್ತಿವೆ. ಇತ್ತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ಆದರೆ, ಶೆಟ್ಟರ್ ಮಾತ್ರ ಇದು ಖಾಸಗಿ ಭೇಟಿ ಎಂದು ಹೇಳುತ್ತಿದ್ದರೂ, ಸದ್ಯದ ರಾಜಕೀಯ ಬೆಳವಣಿಗೆ ಇವರ ಭೇಟಿಗೆ ಬೇರೆ ಅರ್ಥ ಕಲ್ಪಿಸುತ್ತಿದೆ.
ಇತ್ತ ವಿಜಯಪುರದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಅವರು ರಮೇಶ್ ಜಾರಕಿಹೊಳಿ ಭೇಟಿಯಾಗಿರುವುದು ಸೇರಿ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಕಳೆದ ನಾಲ್ಕೈದು ದಿನಗಳ ಬೆಳವಣಿಗೆ ಸಾರಿ ಹೇಳುತ್ತಿದೆ.
ಯತ್ನಾಳ್ ಭೇಟಿಯಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಹ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ. ಈ ನಡುವೆ ರಮೇಶ್ ಜಾರಕಿಹೊಳಿ ಸಹ ಸಚಿವ ಸ್ಥಾನಕ್ಕಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಇವರ ರಹಸ್ಯ ಭೇಟಿಯಲ್ಲಿ ನಡೆದ ಮಾತುಕತೆ ಮಾತ್ರ ಬಹಿರಂಗಗೊಂಡಿಲ್ಲ.
ಮಾತುಕತೆ ನಂತರ ರಮೇಶ್ ಜಾರಕಿಹೊಳಿ ನೇರ ಬೆಳಗಾವಿಗೆ ತೆರಳಿದರೆ, ಬಸನಗೌಡ ಪಾಟೀಲ ಯತ್ನಾಳ್ ಸಿಂದಗಿಯಲ್ಲಿ ನಡೆಯುತ್ತಿರುವ ಅಭಿನಂದನಾ ಸಭೆಯಲ್ಲಿ ಭಾಗವಹಿಸಲು ತೆರಳಿದರು.