ವಿಜಯಪುರ (ಮುದ್ದೇಬಿಹಾಳ) : ರಂಭಾಪುರಿ ಪೀಠದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಜಗದ್ಗುರು ರೇವಣಸಿದ್ದೇಶ್ವರ ಶಿಲಾ ಮೂರ್ತಿಗೆ ನೆರವಾಗದೆ ಈ ರಾಜ್ಯ ಸರ್ಕಾರ ತಟಸ್ಥವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ವೀರ ಸೋಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ನಡೆದ ಇಷ್ಟಲಿಂಗ ಪೂಜೆ, ಸಾಮೂಹಿಕ ವಿವಾಹ, ಧರ್ಮಸಭೆ, ಮುತ್ತೈದೆಯರಿಗೆ ಉಡಿ ತುಂಬುವಿಕೆ, ಪುರಾಣ ಮಂಗಳೋತ್ಸವ ಸಂಯುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಲಾಮೂರ್ತಿ ಸ್ಥಾಪನೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 5 ಕೋಟಿ ಅನುದಾನ ನೀಡಿದ್ದರು. ನಂತರ ಬಂದ ಬಿಜೆಪಿ ಸರ್ಕಾರ, ಈಗಿನ ಕಾಂಗ್ರೆಸ್ ಸರ್ಕಾರ ತಟಸ್ಥ ಧೋರಣೆ ತಾಳಿವೆ. ಹೀಗಾಗಿ ಸಂಕಲ್ಪ ಪೂರ್ಣಗೊಳಿಸಲು ಭಕ್ತರ ಸಹಕಾರ ಪಡೆಯಲು ಹಾಗೂ ಪೀಠವೂ ಸ್ವಲ್ಪ ಹೊರೆಯನ್ನು ಹೊತ್ತು ಆ ಕಾರ್ಯ ಪೂರ್ಣ ಮಾಡಬೇಕೆಂದು ಇಚ್ಛೆ ಪಟ್ಟಿದ್ದೇವೆ ಎಂದರು.
ವಿಜಯಪುರ ಜಿಲ್ಲೆ ಭಕ್ತಿಗೆ ಹೆಸರಾದಂತಹ ನಾಡು:ಆ ಭಾವನೆಯನ್ನು ನಮ್ಮ ಮಡಿವಾಳ ಶಾಸ್ತ್ರಿಗಳು ಹೇಳಿದ್ದಾಗ, ಒಂದೇ ಒಂದು ಮಾತಿನಲ್ಲಿ ಸಿದ್ದನಗೌಡ ಬಿರಾದಾರ್ ಜೋಗಿ ಅವರು ಒಂದು ಲಕ್ಷದ 11 ಸಾವಿರ ರೂಪಾಯಿಯನ್ನು ಆ ಕಾರ್ಯಕ್ಕೆ ನೀಡಿರುವುದು ನಮ್ಮ ಪೀಠಕ್ಕಲ್ಲದೆ ನಮ್ಮೆಲ್ಲ ಶ್ರೀಗಳಿಗೂ ಸಂತೋಷವನ್ನು ಉಂಟುಮಾಡುತ್ತಿದೆ. ನಿಜವಾಗಲೂ ವಿಜಯಪುರ ಜಿಲ್ಲೆ ಭಕ್ತಿಗೆ ಹೆಸರಾದಂತಹ ನಾಡು. ಭಕ್ತಿ ಭಂಡಾರಿ ಬಸವಣ್ಣನವರು ಹುಟ್ಟಿ ಬೆಳೆದಂತಹ ನಾಡಿದು. ಭಕ್ತಿಯ ರಸಗಂಗೆಯನ್ನು ನಾವು ಎಲ್ಲಿ ನೋಡಿದರಲ್ಲಿ ಕಾಣುತ್ತೇವೆ ಎಂದು ಹೇಳಿದರು.