ವಿಜಯಪುರ:ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿದ್ದು, ಸಹಜವಾಗಿ ಅವರು ನಮ್ಮ ರಾಜ್ಯದವರಾಗಿದ್ದಾರೆ ಎನ್ನುವ ಮೂಲಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಖರ್ಗೆ ಪರ ತಮ್ಮ ಬೆಂಬಲ ಸೂಚಿಸಿದ್ದಾರೆ.
ನಗರದ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ರೆಡ್ಡಿ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್, ಕೆಎಎಸ್ ತರಬೇತಿ ನೀಡುವ ಕೇಂದ್ರ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ ಸ್ಪರ್ಧಿಸುತ್ತಿದ್ದಾರೆ. ಖರ್ಗೆ ನಮ್ಮ ರಾಜ್ಯದವರೆ ಆಗಿದ್ದಾರೆ. ಹೀಗಾಗಿ ಅವರತ್ತ ಒಲವು ಜಾಸ್ತಿ ಇದೆ ಎಂದರು.
ಎಐಸಿಸಿ ಅಧ್ಯಕ್ಷ ಸ್ಥಾನಕ್ಜೆ ಗಾಂಧಿ ಪರಿವಾರದವರು ಬಿಟ್ಟು ಬೇರೆ ನಾಯಕರಿಗೆ ಅವಕಾಶ ನೀಡಲಾಗುತ್ತಿದೆ. ಇದು ಯಾವ ಸಂದೇಶ ರವಾನೆಯಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಸಹ ಇದನ್ನೇ ಪ್ರತಿಪಾದಿಸಿದ್ದರು. ಗಾಂಧಿ ಕುಟುಂಬ ಬಿಟ್ಟು ಬೇರೆ ನಾಯಕರಿಗೆ ಕಾಂಗ್ರೆಸ್ ಸರ್ವೋಚ್ಚ ಸ್ಥಾನ ನೀಡಬೇಕು ಎಂದು ಬಯಸಿದ್ದರು. ಅದಕ್ಕೆ ತಕ್ಕಂತೆ ಈಗ ಕಾಲ ಕೂಡಿ ಬಂದಿದೆ ಎಂದು ಹೇಳಿದರು.