ವಿಜಯಪುರ: ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿರಬಹುದು. ಆದರೆ, ಅವರು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಅವರ ಅವಶ್ಯಕತೆ ಇದೆ. ಅವರು ಹಾಗೂ ಅನಂತಕುಮಾರ ಬೈಕ್ ನಲ್ಲಿ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದ್ದಾರೆ ಎಂದು ಶಾಸಕ ರಾಜುಗೌಡ ಹೇಳಿದರು.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಬಿಜೆಪಿ 120 ಸ್ಥಾನ ಬರುವವರೆಗೂ ದುಡಿದಿದ್ದಾರೆ. ಅವರು ಕಟ್ಟಿದ ಪಕ್ಷದಲ್ಲಿ ಈಗ ನಾವು ಅಧಿಕಾರ ನಡೆಸುತ್ತಿದ್ದೇವೆ. ಸದ್ಯ ಅವರಿಗೆ 75 ವರ್ಷ ವಯಸ್ಸಾದ ಕಾರಣ ನಮ್ಮಲ್ಲಿ ಪ್ರಧಾನಿ ಮೋದಿ ಮಾಡಿದ ನಿಯಮಾವಳಿಯಂತೆ ಬಿಎಸ್ವೈ ನಿವೃತ್ತರಾಗಿದ್ದಾರೆ.
ಆದರೂ ಅವರು 75 ವರ್ಷದ ಮೇಲೆಯೂ ಸಿಎಂ ಆಗಿ ಮುಂದುವರೆಯಲು ಕೇಂದ್ರ ಹೈಕಮಾಂಡ್ ಸಹಕರಿಸಿದೆ. ಈಗ ಅವರ ಪುತ್ರ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸಲಿ ಎಂಬ ಬಯಕೆ ಬಿಎಸ್ವೈಗೆ ಇದೆ. ವಿಜಯೇಂದ್ರ ಯೂತ್ ಐಕಾನ್ ಆಗಿದ್ದಾರೆ. ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಗೆಲುವು ಗ್ಯಾರಂಟಿ ಎಂದರು.
75 ವರ್ಷ ಪೂರೈಸಿದವರ ಪಟ್ಟಿ ಮಾಡಲಾಗುತ್ತಿದೆ;ಸದ್ಯ ನಮ್ಮ ಪಕ್ಷದಲ್ಲಿ 75ವರ್ಷ ಮುಗಿದವರ ಪಟ್ಟಿ ಮಾಡಲಾಗುತ್ತಿದೆ. ಅವರನ್ನು ಗುರುತಿಸಿ ಸಾಮೂಹಿಕವಾಗಿ ಅವರ 75 ವರ್ಷದ ಹುಟ್ಟುಹಬ್ಬ ಆಚರಣೆ ಮಾಡಲಾಗುವುದು ಎನ್ನುವ ಮೂಲಕ ಹಿರಿಯ ರಾಜಕಾರಣಿಗಳ ಮುಂದಿನ ಭವಿಷ್ಯದ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದರು. ಬಿಎಸ್ವೈ ತಮ್ಮ ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿರುವುದರಲ್ಲಿ ತಪ್ಪೇನೂ ಇಲ್ಲ. ಮುಂದೆ ಸಹ ಅವರ ಮಾರ್ಗದರ್ಶನದಲ್ಲಿ ರಾಜ್ಯ ಬಿಜೆಪಿ ಮುನ್ನಡೆಯಲಿದೆ. ಅವರು ಪಕ್ಷದ ಶಕ್ತಿಯಾಗಿದ್ದಾರೆ ಎಂದು ಬಿಎಸ್ವೈ ಗುಣಗಾನ ಮಾಡಿದರು.
ಕಪಿಲ್ ದೇವ್ಗೆ ಹೋಲಿಸಿ ಹೊಗಳಿಕೆ:ಬಿಎಸ್ವೈ ಅವರನ್ನು ಕಪೀಲ್ದೇವ್ಗೆ ಹೋಲಿಸಿ ಮಾತನಾಡಿದ ಅವರು, 1983ರಲ್ಲಿ ಕಪಿಲ್ದೇವ್ ನೇತೃತ್ವದಲ್ಲಿ ಭಾರತ ಮೊದಲ ಬಾರಿ ವಿಶ್ವಕಪ್ ಗೆದ್ದಿತ್ತು. ಮುಂದೆ ಕಪಿಲ್ ಸಹ ನಿವೃತ್ತಿ ಹೊಂದಿದಾಗ ಕ್ರೀಡಾ ಪ್ರೇಮಿಗಳು ಬೇಸರಗೊಂಡಿದ್ದರು.