ವಿಜಯಪುರ:ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ರಾಜನಾಳ ಕೆರೆ ಸುಮಾರು 20 ವರ್ಷಗಳ ನಂತರ ಭರ್ತಿಯಾದ ಹಿನ್ನೆಲೆ ಗ್ರಾಮಸ್ಥರು ಕೆರೆಗೆ ಭಾನುವಾರ ಪೂಜೆ ಸಲ್ಲಿಸಿದರು.
ಕೃಷ್ಣಾ ನದಿಯಿಂದ ಮುಳವಾಡ ಏತ ನೀರಾವರಿ 3ನೇ ಹಂತದಿಂದ ತಿಡಗುಂದಿ ಶಾಖಾ ಕಾಲುವೆ ಪೈಪಲೈನ್ ಮೂಲಕ ರಾಜನಾಳ ಕೆರೆಗೆ ನೀರು ಹರಿಸಿ ತುಂಬಿಸಲಾಗಿದೆ. ಸುಮಾರು 260 ಎಕರೆ ಪ್ರದೇಶದಲ್ಲಿರುವ ರಾಜನಾಳ ಕೆರೆ ಭರ್ತಿಯಿಂದ ಸುತ್ತಮುತ್ತಲಿನ 15 ರಿಂದ20 ಗ್ರಾಮಗಳ 14.500 ಹೆಕ್ಟರ್ ಪ್ರದೇಶಕ್ಕೆ ನೀರು ಸಿಗುವಂತಾಗಿದೆ.
ಕೆರೆಗೆ ಭಾಗಿನ ಅರ್ಪಿಸಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ 100 ಕೋಟಿ ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸು ಕೆಲಸ ನಡೆದಿದೆ, ಇದರಿಂದ ಅಂತರ್ಜಲದ ಮಟ್ಟ ಹೆಚ್ಚಾಗಿ ಸುತ್ತಮುತ್ತಲಿನ 15 ಗ್ರಾಮಗಳಿಗೆ ಅನುಕೂಲವಾಗಲಿದೆ, ಕೆರೆಯನ್ನು ರಕ್ಷಿಸುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ ಕೆರೆಯನ್ನು ಕಲುಷಿತವಾಗದ ರೀತಿಯಲ್ಲಿ ನೋಡಿಕೊಂಡರೆ ರೈತರು ಸಮೃದ್ದರಾಗುತ್ತಾರೆ ಎಂದರು.